Menu

ಬಿಡದಿಯಲ್ಲಿ ಭೂ ಸ್ವಾಧೀನ ವಿರುದ್ಧ ಮಾತ್ರ ಕುಮಾರಸ್ವಾಮಿ, ನಿಖಿಲ್ ಹೋರಾಟ: ಶಾಸಕ ಬಾಲಕೃಷ್ಣ 

ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರದಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಹಾಸನದಲ್ಲಿ ಕೇಂದ್ರದಿಂದ ಮಂಜೂರಾಗುವ ಮುನ್ನವೇ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್  ಇಲ್ಲೆಲ್ಲೂ ಮಾಡದ ಹೋರಾಟವನ್ನು ಬಿಡದಿಯಲ್ಲಿ ಮಾತ್ರ ಯಾಕೆ ಮಾಡುತ್ತಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಕಿಡಿ ಕಾರಿದರು.

ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.ಮುಖ್ಯಮಂತ್ರಿಗಳು ಕುಮಾರಸ್ವಾಮಿ ಅವರೊಂದಿಗೆ ಚರ್ಚೆಗೆ ದಿನಾಂಕ ಸಮಯ ನಿಗದಿ ಮಾಡಿದ ಬಳಿಕ ಕುಮಾರಸ್ವಾಮಿ  ಬೈರಮಂಗಲಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ,“ಇದನ್ನೇ ಬಾಲಿಶ ವರ್ತನೆ ಎಂದು ಹೇಳುವುದು. ಪ್ರಬುದ್ಧ ನಾಯಕರಿಗೆ ಇರಬೇಕಾದ ಕನಿಷ್ಠ ಜ್ಞಾನ ಕುಮಾರಣ್ಣ ಅವರಿಗಿಲ್ಲ. ಸಿಎಂ ಅಲ್ಲಿಗೆ ಬಂದರೆ ಅವರ ಕಡೆ ರೈತರು, ಇವರ ಕಡೆ ರೈತರು ಬರುತ್ತಾರೆ. ಜನ ಹೆಚ್ಚಾಗಿ ಸೇರುತ್ತಾರೆ. ಎರಡು ಕಡೆಯವರ ಮಧ್ಯೆ ಮಾರಾಮಾರಿ ನಡೆದರೆ ಯಾರು ಹೊಣೆ,  ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರೈತರ ಹೋರಾಟ ಮುಗಿದು, ಈಗ ರಾಜಕೀಯ ಆಯಾಮ ತೆಗೆದುಕೊಂಡಿದೆ. ರಾಜಕೀಯ ವಿಚಾರ ಎಂದಾಗ ಪಕ್ಷದ ಕಾರ್ಯಕರ್ತರು ಸೇರುತ್ತಾರೆ. ಇದು ಹಿರಿಯ ನಾಯಕರಿಗೆ ಇರಬೇಕಾದ ಕನಿಷ್ಠ ಜ್ಞಾನ ಎಂದು ಕಿಡಿಕಾರಿದರು.

ಗಲಾಟೆಯಾದರೆ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ನಮ್ಮ ತಲೆಗೆ ಕಟ್ಟುವ ಉದ್ದೇಶದಿಂದ ಕುಮಾರಸ್ವಾಮಿ ಅಲ್ಲಿಗೆ ಕರೆಯುತ್ತಿದ್ದಾರೆ.  ಸತ್ಯಾಸತ್ಯತೆ ಜನರ ಮುಂದೆ ಇಡುವುದೇ ನಿಮ್ಮ ಉದ್ದೇಶವಾಗಿದ್ದರೆ ಮಾಧ್ಯಮ ವೇದಿಕೆಗಳ ಮುಂದೆ ಬನ್ನಿ. ಕುಮಾರಸ್ವಾಮಿ ಹಾಗೂ ನಿಖಿಲ್ ಯಾಕೆ ಬಿಡದಿಯಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ? ಬಿಡದಿಯಲ್ಲಿರುವ ನಿಮ್ಮ 35 ಎಕರೆ ಜಾಗ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೀರಾ? ಬೇರೆ ಭಾಗದಲ್ಲಿ ಯಾಕೆ ಹೋರಾಟ ಮಾಡುತ್ತಿಲ್ಲ? ನಿಮ್ಮ ತಂದೆ ಹಾಗೂ ಅಣ್ಣನವರು ಹಾಸನದಲ್ಲಿ ಸ್ವಾಧೀನಪಡಿಸಿರುವ ಭೂಮಿಯನ್ನು ಬಿಡಿಸಿ ನೋಡೋಣ. ಬೇರೆ ಭಾಗದಲ್ಲಿರುವವರು ರೈತರಲ್ಲವೇ? ಅದನ್ನು ಬಿಟ್ಟು ಶಿವಕುಮಾರ್ ಸಿಎಂ ಆಗಿದ್ದಾರೆ, ಅವರಿಗೆ ಮಸಿ ಬಳಿಯಬೇಕು ಎಂದು ಪ್ರಯತ್ನಿಸುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಮೈಸೂರು, ಮಂಡ್ಯ, ಹಾರೋಹಳ್ಳಿಯಿಂದ ಜನರಿಗೆ ದುಡ್ಡುಕೊಟ್ಟು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇದನ್ನು ಹೋರಾಟ ಎಂದು ಹೇಳಲು ಆಗುತ್ತದೆಯೇ? ಅಲ್ಲಿ ಹೋರಾಟ ಮಾಡುತ್ತಿರುವ ರೈತರೇ ರಾಜಕೀಯದವರು ಬಂದು ಈ ಹೋರಾಟ ದಿಕ್ಕು ತಪ್ಪಿಸಿದರು ಎಂದು ಎಂದು ಹೇಳುತ್ತಿದ್ದಾರೆ.  ಮೋದಿ ಅವರು ಕುಮಾರಸ್ವಾಮಿಗೆ ಬಿಡದಿಯಲ್ಲೇ ವಾಸ್ತವ್ಯ ಹೂಡು ಎಂದು ಹೇಳಿ ಕಳುಹಿಸಿದ್ದಾರಾ? ಕೇಂದ್ರ ಸಚಿವರಾಗಿ ಮೇಕೆದಾಟು, ಮಹದಾಯಿ ಯೋಜನೆಗೆ ಮುಕ್ತಿ ಕೊಡಿಸಿ. ಅದನ್ನು ಬಿಟ್ಟು ಬಸ್ ಮಾಡಿಕೊಂಡು ಜನಗಳನ್ನು ಕರೆಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್ ಬಗ್ಗೆ ಬಾಯಿಗೆ ಬಂದಂತೆ ಮಾಡನಾಡಲು ನಮಗೆ ಬರುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಶಿವಕುಮಾರ್  ನೀವು ನಾಲ್ಕೈದು ಜನ ಬನ್ನಿ ಚರ್ಚೆ ಮಾಡೋಣ ಎಂದು ಕರೆದರೆ, ಬೈರಮಂಗಲಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದರು. ಕುಮಾರಸ್ವಾಮಿ  ಈ ಯೋಜನೆ ಕೈಬಿಟ್ಟಿದ್ದರೆ ರೈತರಿಗೆ 40% ಭೂಮಿ ಪರಿಹಾರ ನೀಡುವುದಾಗಿ ಹೇಳಿದ್ದೇಕೆ ಎಂದು ಬಾಲಕೃಷ್ಣ ಪ್ರಶ್ನಿಸಿದರು.

ಎಲ್ಲಾ ಕಡೆ ಭೂಸ್ವಾಧೀನ ಪ್ರಕ್ರಿಯೆಗೆ ಈ ರೀತಿ ವಿರೋಧವಾದರೆ ಹೇಗೆ ಎಂದು ಕೇಳಿದಾಗ ಬೆಂಗಳೂರು ಬೆಳೆಯಬೇಕು ಎಂದಾಗ ರೈತರ ಮನವೊಲಿಸಿ ಯೋಜನೆ ಮಾಡಬೇಕು. ಕುಮಾರಸ್ವಾಮಿ ರೈತರಿಗೆ ಅಭಿವೃದ್ಧಿಪಡಿಸಿದ 40% ಭೂಮಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು.  ನಾವು 50% ನೀಡುತ್ತಿದ್ದೇವೆ. ಅವರು ಹೇಳಿದರೆ ರೈತರ ಪರ, ನಾವು ಹೇಳಿದರೆ ದಲ್ಲಾಳಿಗಳೇ?, 2018ರಲ್ಲಿ ಕುಮಾರಸ್ವಾಮಿ ಅವರು ಈ ಯೋಜನೆ ನನ್ನ ಕನಸಿನ ಕೂಸು ಇದನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದ್ದರಾ ಇಲ್ಲವೇ? ನಾವು ರೈತರ ಮೇಲೆ ಏಕಾಏಕಿ ಗದಾಪ್ರಹಾರ ಮಾಡಿಲ್ಲ.  ರೈತರು ಬಂದು ಇದಕ್ಕೆ ಮುಕ್ತಿ ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಈ ತೀರ್ಮಾನ ಮಾಡಿದೆವು.  ನಾವು ಹಣವನ್ನೇ ತೆಗೆದುಕೊಳ್ಳಿ ಎಂದು ರೈತರಿಗೆ ಒತ್ತಾಯ ಮಾಡುತ್ತಿಲ್ಲ. ರೈತರು 50% ಅಭಿವೃದ್ಧಿಪಡಿಸಿದ ಭೂಮಿಯನ್ನೇ ತೆಗೆದುಕೊಳ್ಳಲಿ. ಈ ಭಾಗ ಅಭಿವೃದ್ಧಿಯಾಗುತ್ತಿದ್ದಂತೆ ರೈತರ ಭೂಮಿಗೆ ಹೆಚ್ಚಿನ ಮೌಲ್ಯ ಬರುತ್ತದೆ. ಇದನ್ನು ಕುಮಾರಸ್ವಾಮಿ  ಅರ್ಥಮಾಡಿಕೊಳ್ಳಬೇಕು. ಮಾಧ್ಯಮಗಳ ಮುಂದೆ ಚರ್ಚೆಗೆ ಬಂದರೆ ನಾವು ಸಿದ್ಧ, ಬಿದಿಗೆ ಬನ್ನಿ ಹೊಡೆದಾಡೋಣ ಎಂದರೆ ನಾವು ಅದಕ್ಕೆ ಸಿದ್ಧರಿಲ್ಲ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ನೀವು ಈ ಯೋಜನೆ ವಿರೋಧಿಸಿದ್ದ ದಾಖಲೆಗಳನ್ನು ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿದ್ದಾರೆ ಎಂದು ಕೇಳಿದಾಗ,  ರೈತರ ಒತ್ತಾಯದ ಮೇರೆಗೆ ನಾವು 50% ಭೂಮಿ ಪರಿಹಾರವಾಗಿ ನೀಡಲು ಸಿದ್ಧ ಎಂದು ತಿಳಿಸಿದ್ದೇವೆ.  ಕೆರೆ ಶುದ್ಧೀಕರಣಕ್ಕೆ 2 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಹೋರಾಟ ಮಾಡುತ್ತಿರುವ ನಾಯಕರು ಈಗ ಇರುವ ಕೆರೆಯಲ್ಲಿ  ಒಂದು ಬಾರಿ ಇಳಿದರೆ  ಕೈಕಾಲುಗಳಲ್ಲಿ ಕಜ್ಜಿ ಬರುತ್ತವೆ. ಕಾಲಿಗೆ ಬೂಟ್, ಕೈಗೆ ಗ್ಲೌಸ್ ಹಾಕದೆ ವ್ಯವಸಾಯ ಮಾಡಲು ಸಾಧ್ಯವಿಲ್ಲ. ನೀರಾವರಿ ವ್ಯವಸ್ಥೆ ಅತ್ಯುತ್ತಮವಾಗಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವು. ಗಲೀಜು ನೀರು ಅಲ್ಲಿದೆ ಎಂದರು.

ಬಹಿರಂಗ ಕಾರ್ಯಕ್ರಮದಲ್ಲಿ ಚೆಕ್ ನೀಡಬಹುದಾಗಿತ್ತಲ್ಲವೇ ಎಂದು ಕೇಳಿದಾಗ,“ಇವರು ಸರ್ಕಾರದ ಬಳಿ ದುಡ್ಡಿಲ್ಲ, ಪರಿಹಾರ ನೀಡುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ನಾವು ಕಾನೂನು ಪ್ರಕಾರ ಚೆಕ್ ನೀಡುವಂತಿಲ್ಲ. ಆರ್ ಟಿಜಿಎಸ್ ಮಾಡಬೇಕು. ಭೂಮಿ ನೀಡಲು ಒಪ್ಪಿಗೆ ಕೊಡುವ ರೈತರಿಗೆ ಆರ್ ಟಿಜಿಎಸ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.  ಭೂಮಿ ಮೇಲೆ 1 ಲಕ್ಷ ಪಡೆದಿರುವ ಸಾಲ 10 ಲಕ್ಷದವರೆಗೂ ಏರಿಕೆಯಾಗಿದ್ದವು.  ಬ್ಯಾಂಕಿನವರನ್ನು ಕರೆಸಿ ಒಟಿಎಸ್ ಮಾಡುತ್ತಿದ್ದೇವೆ. ರೈತರಿಂದ ಅಸಲು ಕಟ್ಟಿಸಿ, ಉಳಿದ ಬಡ್ಡಿ ಮನ್ನಾ ಮಾಡಲು ಬ್ಯಾಂಕಿನವರೊಂದಿಗೆ ಚರ್ಚೆ ಮಾಡಲಾಗಿದೆ.  ಕುಮಾರಸ್ವಾಮಿ ಹಾಗೂ ನಿಖಿಲ್ ಅವರಿಗೆ ಶಿವಕುಮಾರ್ ಜನಪ್ರಿಯತೆ ಸಹಿಸಲಾಗುತ್ತಿಲ್ಲ” ಎಂದು ತಿಳಿಸಿದರು.

ಯೋಜನೆ ಮಾಡದೆ ಕೆರೆ ಶುದ್ಧೀಕರಣ ಮಾಡಲು ಸಾಧ್ಯವಿಲ್ಲವೇ ಎಂದು ಕೇಳಿದಾಗ,  ಕೆರೆ ಅಭಿವೃದ್ಧಿ ಮಾಡಿ ಇವರಿಗೆ ನಿರ್ವಹಣೆಗೆ ನೀಡಲು ಮುಂದಾಗಿದ್ದೇವೆ. ಈ ಕೆರೆ ನೀರು ಶಾಶ್ವತವಾಗಿ ಉತ್ತಮವಾಗಿರಬೇಕು ಎಂದು ಯೋಜನೆ ರೂಪಿಸುತ್ತಿದ್ದೇವೆ.  ಒಂದು ಭಾಗದ ಹಸಿರು ಮಾತ್ರ ಯಾಕೆ ತೋರಿಸುತ್ತೀರಿ,  ಪಕ್ಕದ ಬನ್ನಿಕುಪ್ಪೆ ಪಂಚಾಯಿತಿ, ಇತರ ಪಂಚಾಯಿತಿ ತೋರಿಸಿ. ಅಲ್ಲಿ ಎಲ್ಲ ಹಸಿರು ಬಡಾವಣೆಗಳಾಗಿವೆ.   ಕುಮಾರಸ್ವಾಮಿ ರೆಡ್ ಜೋನ್ ಮಾಡಿರುವುದರಿಂದ ಇಲ್ಲಿ ಹಸಿರು ಹಾಗೇ ಉಳಿದಿದೆ. ಇಲ್ಲದಿದ್ದರೆ ಇಲ್ಲೂ ರಿಯಲ್ ಎಸ್ಟೇಟ್ ಆಗುತ್ತಿತ್ತು. 33 ಸಾವಿರ ಕೋಟಿ ಎಂದು ಹೇಳುತ್ತಾರೆ. ಅದರಲ್ಲಿ 20 ಸಾವಿರ ಕೋಟಿ ಪರಿಹಾರಕ್ಕೆ ನೀಡಬೇಕು. ಉಳಿದ ಹಣ ರಸ್ತೆ ಹಾಗೂ ಮೂಲಸೌಕರ್ಯಕ್ಕೆ ನೀಡಬೇಕು. ಹೆಚ್ಚಿನ ರೈತರು ನಮಗೆ ಪರಿಹಾರ ಬೇಕು ಎಂದು ಕೇಳಿದ ಕಾರಣಕ್ಕೆ ನಾವು ಈ ಯೋಜನೆ ಕೈಗೆತ್ತಿಕೊಂಡೆವು. ಸಿದ್ದರಾಮಯ್ಯ  ಇದ್ದಾಗ ನಿಖಿಲ್ ಹಾಗೂ ಕುಮಾರಸ್ವಾಮಿ ಒಂದು ದಿನವೂ ಹೋರಾಟ ಮಾಡಲಿಲ್ಲ.  ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ  ಹೋರಾಟ ಯಾಕೆ ಎಂದು ಪ್ರಶ್ನಿಸಿದರು.

ನಿಮ್ಮ ಸವಾಲು ಪ್ರತಿಸವಾಲಿನ ಮಧ್ಯೆ ರೈತರು ಅತಂತ್ರವಾಗುತ್ತಾರಾ ಎಂದು ಕೇಳಿದಾಗ, “ರೈತರಿಗೆ ಏನು ಬೇಕೋ ಅದನ್ನು ಮಾಡುತ್ತೇವೆ.  ರೆಡ್ ಜೋನ್ ವಲಯವಾಗಿರುವುದರಿಂದ ಅಲ್ಲಿ 1 ಕೋಟಿಗೂ ಅಧಿಕ ಪರಿಹಾರ ನೀಡಲು ಅವಕಾಶವಿಲ್ಲ. 500 ಎಕರೆ ವರ್ಗಾವಣೆಯಾಗಿದ್ದು, ಎಲ್ಲವೂ 50-80 ಲಕ್ಷಕ್ಕೆ ವರ್ಗಾವಣೆಯಾಗಿದೆ. ನಾವು 2.50 ಕೋಟಿ ನೀಡುತ್ತಿದ್ದೇವೆ. ಹಣ ಬೇಡವಾದರೆ ಭೂಮಿಯನ್ನೇ ಪರಿಹಾರವಾಗಿ ಪಡೆಯಿರಿ. ನಮ್ಮ ಅಭ್ಯಂತರವಿಲ್ಲ. ಸಣ್ಣ ರೈತರ ರಕ್ಷಣೆಗಾಗಿ  ದುಬಾರಿ ಪರಿಹಾರ ನೀಡುತ್ತಿದ್ದೇವೆ. ಬಡವರಿಗೆ ಅನುಕೂಲವಾಗಲಿ ಎಂದು ಇಡಗಂಟು ನೀಡುತ್ತಿದ್ದೇವೆ ಎಂದು ತಿಳಿಸಿದರು.

 

 

Related Posts

Leave a Reply

Your email address will not be published. Required fields are marked *