Menu

ಇದೇ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ: ಸಿಎಂ ಡಿಕೆ ಶಿವಕುಮಾರ್‌

ರಾಹುಲ್ ಗಾಂಧಿ  ಮಾರ್ಗದರ್ಶನದಂತೆ  ಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ ನಡೆಸಲಾಗುವುದು. ವಿದ್ಯಾರ್ಥಿ ನಾಯಕರ ಚುನಾವಣೆಯನ್ನು ಕಾಲೇಜುಗಳಲ್ಲಿ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು.  ಆ ಮೂಲಕ ಪಂಚಾಯಿತಿಗಳಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ತಯಾರು ಮಾಡಲಾಗುವುದು. ಇನ್ನು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ತಪ್ಪಿಸಲಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಘಟಕ, ಮಹಿಳಾ ಘಟಕ ಹೆಚ್ಚಿನ ಸಂಘಟನೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.  ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಸದಸ್ಯರು ಗ್ಯಾರಂಟಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆ ಮಾಡಬೇಕು ಎಂದು  ಕರೆ ನೀಡಿದರು.

ಆರು ವರ್ಷಗಳಲ್ಲಿ ನನ್ನ ಜೊತೆ ಪಕ್ಷದ ಅನೇಕ ಪದಾಧಿಕಾರಿಗಳು ಶ್ರಮಿಸಿದ್ದು, ಎಲ್ಲಾ ಶಾಸಕರು ಹಾಗೂ ಮುಖಂಡರು ತನು, ಮನ, ಧನ ಅರ್ಪಿಸಿ ನನಗೆ ಶಕ್ತಿ ತುಂಬಿದ್ದಾರೆ. ಎಷ್ಟೋ ಜನಕ್ಕೆ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ನಾವು ಗ್ಯಾರಂಟಿ ಯೋಜನೆಗಳ ಸಮಿತಿ ಮಾಡಿ, ಸಾವಿರಾರು ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಗೆ ಚರ್ಚೆ ಮಾಡಿದ್ದೇವೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಈ ಸಮಿತಿಯಲ್ಲಿ ನೇಮಕ ಮಾಡಲಾಗುವುದು ಎಂದು ಘೋಷಿಸಿದರು.

ಪ್ರತಿ ವಾರ್ಡ್ ಹಾಗೂ ಪಂಚಾಯಿತಿಯಲ್ಲಿ ಐದು ಜನರಂತೆ, 7 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್ ಗಳಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು.  ಆಮೂಲಕ ನಾವು ಎಷ್ಟು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ನೀವೇ ಆಲೋಚಿಸಿ. ನಾಯಕನಾದವನು ನಾಯಕರನ್ನು ಬೆಳೆಸಬೇಕೇ ಹೊರತು, ಹಿಂಬಾಲಕರನ್ನಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.

ಇಡೀ ಸರ್ಕಾರ ಹಾಗೂ ಪಕ್ಷ ಹರಿಪ್ರಸಾದ್ ಅವರ ಜೊತೆಗೆ ಇರಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಾಗಿ ನಿಮ್ಮ ಜತೆಗೆ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದು 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ. 2028ರಲ್ಲಿ ಹಾಗೂ 2029ರಲ್ಲೂ ನಿಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂದೇಶ ನೀಡಿದರು.

ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಮಾರ್ಚ್ 10, 2020ರಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರು. ನನಗೆ ಈ ರೀತಿ ದೊಡ್ಡ ಕಾರ್ಯಕ್ರಮ ಮಾಡಲು ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಪ್ರತಿ ಪಂಚಾಯಿತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಜೂಮ್ ಮೂಲಕ 11 ಸಾವಿರ ಕಡೆಗಳಿಂದ ಡಿಜಿಟಲ್ ವೇದಿಕೆ ಮೂಲಕ ಸಂವಿಧಾನದ ಪೀಠಿಕೆ ಪಠಿಸಿ, ನಾನು ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದ್ದೆ ಎಂದು ತಿಳಿಸಿದರು.

ನನ್ನ ಶಕ್ತಿ ಮೀರಿ, ಕಾರ್ಯಕರ್ತರ ಸೇವೆ ಮಾಡಿ, ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನನ್ನಿಂದ ಅನೇಕ ತಪ್ಪುಗಳಾಗಿರಬಹುದು. ರೈತರು, ಕಾರ್ಮಿಕರು, ಯುವ ಪೀಳಿಗೆಯವರ ಮಧ್ಯೆ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇಂದು ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ವಿರೋಧ ಪಕ್ಷದಲ್ಲಿದ್ದಾಗ, ನಾನು ಹಾಗೂ ಸಿದ್ದರಾಮಯ್ಯನವರು ಸೇರಿ ನಿಮ್ಮೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ, ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಶ್ರಮಿಸಿದ್ದೇವೆ ಎಂದು ತಿಳಿಸಿದರು.

ನಾನು ಈ ಜವಾಬ್ದಾರಿ ವಹಿಸಿಕೊಂಡಾಗ ಕೋವಿಡ್ ಬಿಕ್ಕಟ್ಟು ಎದುರಾಗಿತ್ತು. ನಾನು, ನಮ್ಮ ಕಾರ್ಯಾಧ್ಯಕ್ಷರು, ಶಾಸಕರು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಒಟ್ಟಾಗಿ ಸೇರಿ ಪರಿಸ್ಥಿತಿ ಎದುರಿಸಿದೆವು. ಸಂಕಷ್ಟದಲ್ಲಿದ್ದ ಜನರಿಗೆ ಲಕ್ಷಾಂತರ ಆಹಾರ ಕಿಟ್ ವಿತರಣೆ ಮಾಡಿದೆವು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬೆಳೆ ಖರೀದಿ ಮಾಡಿ, ಬಡವರಿಗೆ ಉಚಿತವಾಗಿ ಹಂಚಿದೆವು. ಆಮೂಲಕ ಜನರಿಗೆ ಆತ್ಮಧೈರ್ಯ ತುಂಬಿದೆವು. ಬಿಜೆಪಿ ಸರ್ಕಾರ, ವಲಸೆ ಕಾರ್ಮಿಕರಿಂದ ಬಸ್ ದರ ಮೂರು ಪಟ್ಟು ಹೆಚ್ಚಿಸಿ ಸುಲಿಗೆ ಮಾಡಲು ಮುಂದಾದಾಗ ಸರ್ಕಾರಕ್ಕೆ 1 ಕೋಟಿ ಹಣ ನೀಡಲು ಮುಂದಾಗಿ, ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆವು. ನಮ್ಮ ಆಗ್ರಹ ದೇಶಕ್ಕೆ ಮಾದರಿಯಾಯಿತು. ನಂತರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ನಮ್ಮ ಜನ ಪ್ರಾಣಬಿಟ್ಟರು. ನಾನು ಹಾಗೂ ಸಿದ್ದರಾಮಯ್ಯ ಪರಿಸ್ಥಿತಿ ಪರಿಶೀಲಿಸಿವಾಸ್ತವ ಅರಿತೆವು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡಿದೆವು. ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ವಾಗ್ದಾನ ನೀಡಿದೆವು. ನಾವು ಅದರಂತೆ ಆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಿ, ಕೊಟ್ಟ ಮಾತು ಈಡೇರಿಸಿದ್ದೇವೆ ಎಂದು ಸ್ಮರಿಸಿದರು.

ರಾಜ್ಯದ ಜನತೆ ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆಂಬಲ ನೀಡಿದರು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕೃಷಿ ಕರಾಳ ಕಾಯ್ದೆ ಜಾರಿಗೆ ತಂದಾಗ ನಾವು ಹೋರಾಟ ಮಾಡಿದೆವು. ಇಂಧನ ದರ ಏರಿಕೆ ವಿರುದ್ಧ 100 ನಾಟೌಟ್, ಎತ್ತಿನಗಾಡಿ ಮೆರವಣಿಗೆ, ಟಾಂಗಾ ಜಾಥ, ಸೈಕಲ್ ಜಾಥ ಮಾಡಿದೆವು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಇಬ್ಬರು ಮಂತ್ರಿಗಳು ರಾಜೀನಾಮೆ ನೀಡುವಂತೆ ಮಾಡಿದೆವು. ರಾಷ್ಟ್ರಧ್ವಜ ಅಪಮಾನಿಸಿದ ಈಶ್ವರಪ್ಪ ವಿರುದ್ಧ, ಪಿಎಸ್ಐ ಸೇರಿದಂತೆ ವಿವಿಧ ಹಗರಣ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಾಗೂ ತನಿಖಾ ಸಂಸ್ಥೆಗಳ ಕಿರುಕುಳ ಹಾಗೂ ಪಿತೂರಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದೆವು ಎಂದರು.

ನೀವೆಲ್ಲರೂ 75 ಲಕ್ಷ ಸದಸ್ಯತ್ವ ಮಾಡಿಸುವ ಮೂಲಕ ಈ ದೇಶದಲ್ಲಿ ಇತಿಹಾಸ ಬರೆದಿದ್ದೀರಿ. ನಾವು ರೈತರಿಗಾಗಿ ಕೃಷ್ಣ, ಮಹದಾಯಿ ಯೋಜನೆಗೆ ಹೋರಾಟ, ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿದೆವು. ಮುಂದಿನ ದಿನಗಳಲ್ಲಿ ಈ ಯೋಜನೆ ಯಾವ ಹಂತಕ್ಕೆ ಬಂದಿದೆ ಎಂದು ಚರ್ಚೆ ಮಾಡುತ್ತೇನೆ. ಒಳಮೀಸಲಾತಿ ಆಗ್ರಹಿಸಿ ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಮಾಡಿದೆವು. ನಿರುದ್ಯೋಗ ವಿರುದ್ಧ ಹೋರಾಟ ಮಾಡಿದ್ದೇವೆ.  ಪ್ರಜಾಧ್ವನಿ ಯಾತ್ರೆ ಮೂಲಕ ನಮ್ಮ ಚುನಾವಣಾ ಪ್ರಚಾರ ಆರಂಭಿಸಿದೆವು. ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತೆಗೆದು ಕಸ ಗುಡಿಸಿ ನಮ್ಮ ಮೊದಲ ಗ್ಯಾರಂಟಿ ಗೃಹಜ್ಯೋತಿ ಯೋಜನೆ ಘೋಷಿಸಿದೆವು.  ನಾವು ಅಧಿಕಾರಕ್ಕೆ ಬಂದ ನಂತರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. 1.21 ಕೋಟಿ ಬಡ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇದು ರಾಷ್ಟ್ರಕ್ಕೆ ನಮ್ಮ ಕಾರ್ಯಕ್ರಮ ರವಾನಿಸಿರುವ ಸಂದೇಶ ಎಂದು ಹೇಳಿದರು.

ಈ ಹೋರಾಟಗಳು ಕೇವಲ ನನ್ನದು ಅಥವಾ ಸಿದ್ದರಾಮಯ್ಯ ಅವರ ಹೋರಾಟ ಮಾತ್ರವಲ್ಲ. ವೇದಿಕೆ ಮೇಲಿರುವ ಮುಖಂಡರು ಹಾಗೂ ಕಾರ್ಯಕರ್ತರು ನಿಮ್ಮೆಲ್ಲರ ಶಕ್ತಿಯಿಂದ ಇಂದು ಪಕ್ಷ ರಾಜ್ಯದಲ್ಲಿ 136 ಸೀಟುಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ನಾನು ಅಧ್ಯಕ್ಷನಾಗಿದ್ದಾಗ ಮೀನುಗಾರರು, ನೇಕಾರರು, ಲಂಬಾಣಿಗಳು, ತಿಗಳರು, ಮಡಿವಾಳರು, ಗಾಣಿಗರು, ಉಪ್ಪಾರ ಸಮುದಾಯಗಳ ಜೊತೆ ಸಂವಾದ ಮಾಡಿ ಅವರ ಸಮಸ್ಯೆ ಕೇಳಿದೆ. ರೈತರು, ಕಾರ್ಮಿಕರು, ಚಾಲಕರು, ಬೀದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದ ಜನರ ಸಮಸ್ಯೆ ಆಲಿಸಿದ್ದೆ ಎಂದು ಸ್ಮರಿಸಿದರು.

ರಾಹುಲ್ ಗಾಂಧಿ  ಭಾರತವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ ಜೋಡೋ ಯಾತ್ರೆ ಮಾಡಿದರು. ನಮ್ಮ ರಾಜ್ಯದಲ್ಲಿ 23 ದಿನಗಳ ಕಾಲ ಈ ಪಾದಯಾತ್ರೆ ಸಾಗಿತು. ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.  ನಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಮಹಾತ್ಮಾ ಗಾಂಧಿ  ಅಲಂಕರಿಸಿದ ಸ್ಥಾನದಲ್ಲಿ ಕೂತರು. ಈ ಎಲ್ಲಾ ಸಂದರ್ಭಗಳಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ನನ್ನ ಅಧಿಕಾರ ಅವಧಿಯಲ್ಲಿ ಈ ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ.  ನಿಮ್ಮೆಲ್ಲರ ಸಹಕಾರ ಪರಿಶ್ರಮದಿಂದ ಇದು ಸಾಧ್ಯವಾಯಿತು ಎಂದರು.

ಮಹಾತ್ಮಾ ಗಾಂಧಿ ಅವರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಅಂಗವಾಗಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಐತಿಹಾಸಿಕ ಕಾರ್ಯಕ್ರಮ, ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದೆವು.  ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು ಎಂದು ವಿವರಿಸಿದರು.

ನಾನು ಹಾಗೂ ಹರಿಪ್ರಸಾದ್ ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದವರು. ನನಗಿಂತ 2-3 ವರ್ಷ ಬೇಗ ಚುನಾವಣೆಗೆ ಸ್ಪರ್ಧಿಸಿದರು. ಅವರು 1983ರಲ್ಲಿ ಚುನಾವಣೆ ಸ್ಪರ್ಧಿಸಿದರೆ, ನಾನು 1985ರಲ್ಲಿ ಸ್ಪರ್ಧೆ ಮಾಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ರಾಷ್ಟ್ರದೆಲ್ಲೆಡೆ ಪಕ್ಷ ಸಂಘಟಿಸಿರುವ ಹಿರಿಯ ನಾಯಕರಿಗೆ ಈ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿರುವುದು ಅತ್ಯಂತ ಸಮಾಧಾನ ತಂದಿದೆಎಂದರು.

ಕೇಂದ್ರ ಸರ್ಕಾರ  ವಿಶೇಷ ಮತಪಟ್ಟಿ ಪರಿಷ್ಕರಣೆಮೂಲಕ ತಮಿಳುನಾಡಿನಲ್ಲಿ 64 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತಗಳನ್ನು ತೆಗೆದುಹಾಕಿದ್ದಾರೆ. ರಾಜ್ಯದಲ್ಲಿ ನಡೆಯುವ SIR ನಮಗೆ ಅಪಾಯವೂ ಹೌದು, ಅವಕಾಶವೂ ಹೌದು. ಹೀಗಾಗಿ ನಿಮ್ಮ ಮತದಾನದ ಹಕ್ಕನ್ನು ರಕ್ಷಣೆ ಮಾಡಿಕೊಳ್ಳಬೇಕು. SIR ಎಂದರೆ ಹೊಸದಾಗಿ ಮತಪಟ್ಟಿ ರಚಿಸುವುದಾಗಿದೆ.  ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿ ಬಿಎಲ್ಓ ನೀಡುವ ಅರ್ಜಿಗಳನ್ನು ತುಂಬಿ ದಾಖಲೆ ಸಮೇತ ಸಲ್ಲಿಕೆ ಮಾಡಿದರೆ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ. ಇಲ್ಲದಿದ್ದರೆ ಮತದಾನದ ಹಕ್ಕು ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

“ಬಡವರನ್ನು ಉಳಿಸಿ, ಮತದಾನದ ಹಕ್ಕು ರಕ್ಷಿಸಬೇಕು. ಜನರಿಗೆ ಅಗತ್ಯವಿರುವ ದಾಖಲೆ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾರಿಗೆ ಮತ ಇರುವುದಿಲ್ಲ, ಅವರಿಗೆ ಅವಕಾಶ, ಗ್ಯಾರಂಟಿ, ಪಿಂಚಣಿ ಸಿಗುವುದಿಲ್ಲ. ಬಿಜೆಪಿ ಸರ್ಕಾರ ಬೇರೆ ರಾಜ್ಯಗಳಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆ ಸೌಲಭ್ಯ ನಿಲ್ಲಿಸಿದ್ದಾರೆ. ಹೀಗಾಗಿ ನಾವು ಎಲ್ಲರ ಮತದಾನದ ಹಕ್ಕು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *