ಗದಗದ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಪ್ರಶಾಂತ್ ಹುಡೇದ (19) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅನ್ಣ ತಮ್ಮನ ಮೃತದೇಹವನ್ನು ಮನೆಗೆ ತಂದಿದ್ದಾನೆ. ಗದಗ ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ.
ಜಮೀನಿನಲ್ಲಿ ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಸಹೋದರರಿಬ್ಬರು ಹೋಗಿದ್ದರು. ಸಿಡಿಲು ಬಡಿದು ಪ್ರಶಾಂತ್ ಮೃತಪಟ್ಟರೆ, 60 ಮೀಟರ್ ದೂರದಲ್ಲಿದ್ದ ಅಣ್ಣ ಅಪಾಯದಿಂದ ಪಾರಾಗಿದ್ದಾರೆ.
ಹಲಸಿನ ಹಣ್ಣು ಕೊಯ್ಯಲು ಹೋಗಿ ವಿದ್ಯಾರ್ಥಿ ಸಾವು
ಹಲಸಿನ ಹಣ್ಣು ಕೊಯ್ಯಲೆಂದು ಮರ ಹತ್ತಿದ ವಿದ್ಯಾರ್ಥಿ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದಿದೆ. ಆಕಾಶ್(23) ಮೃತಪಟ್ಟ ವಿದ್ಯಾರ್ಥಿ. ಘಟನಾ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವಿಜಯನಗರದ ಕೂಡ್ಲಿಗಿಯ ವಿದ್ಯಾರ್ಥಿ ಆಕಾಶ್, ಜಿಕೆವಿಕೆಯಲ್ಲಿ ಸರ್ಕಾರಿ ಸೀಟ್ ಪಡೆದು ಎಂಎಸ್ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದಿದ್ದಾನೆ.
ಗಾಯಗೊಂಡಿದ್ದ ಆಕಾಶ್ನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆಕಾಶ್ ಎನ್ಎಸ್ಎಸ್ನಲ್ಲಿ ರಾಷ್ಟ್ರಪತಿಯಿಂದ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ. 2024ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ.


