ಸಿಎಂ ಸಿದ್ದರಾಮಯ್ಯ ಇಂದು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟಿಸುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬುಧವಾರ ರಾತ್ರಿ ಮುಂಬೈಗೆ ಪ್ರಯಾಣಿಸಿದ್ದು, ಮೂರು ದಿನ ಲಭ್ಯ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಂದರೆ ಗುರುವಾರ ರಾಜೀನಾಮೆ ನೀಡಲಿದ್ದು, ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದ್ದಾರೆ, ಬೆಳಗ್ಗೆ 11:30 ಕ್ಕೆ ಮತ್ತು ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶ ಲಭಿಸಿತ್ತು, ಡಿಕೆ ಶಿವಕುಮಾರ್ ಕೆಪಿಸಿಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಶುಕ್ರವಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳು ಮತ್ತು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರಗತಿಯ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಕಳೆದೆರಡು ದಿನಗಳಿಂದ ಸಂಚಲನ ಸೃಷ್ಟಿಸಿತ್ತು.
ರಾಜ್ಯಪಾಲರ ಹತ್ತಿರದ ಸಂಬಂಧಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಭೇಟಿ ಮಾಡಲು ತುರ್ತಾಗಿ ಮುಂಬೈಗೆ ತೆರಳಿದ್ದಾರೆ. ಬುಧವಾರ ತಡರಾತ್ರಿ 11:45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಮುಂಬೈಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯಪಾಲರ ಈ ಅನಿರೀಕ್ಷಿತ ನಿರ್ಗಮನವು ಇಂದಿನ ರಾಜಕೀಯ ಸನ್ನಿವೇಶದಲ್ಲಿ ಬಹಳಷ್ಟು ಕುತೂಹಲ ಸೃಷ್ಟಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಈ ಮೊದಲೇ ಹೇಳಲಾಗಿತ್ತು. ಅದಕ್ಕಾಗಿ ಅವರು ರಾಜ್ಯಪಾಲರಿಗೆ ಭೇಟಿಯ ಸಮಯಾವಕಾಶ ಕೋರಿದ್ದರು.
ರಾಜ್ಯಪಾಲರ ಈ ತುರ್ತು ಪ್ರಯಾಣ ವೈಯಕ್ತಿಕ ಕಾರಣದ್ದೇ ಅಥವಾ ಅದರ ಹಿಂದೆ ಯಾವುದಾದರೂ ರಾಜಕೀಯ ಅಡಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಸಿದ್ದರಾಮಯ್ಯ ಅವರ ರಾಜೀನಾಮೆ ಸ್ವೀಕರಿಸುವುದನ್ನು ತಪ್ಪಿಸಲು ಅಥವಾ ಹೈಕಮಾಂಡ್ನ ಮುಂದಿನ ಸೂಚನೆಗಾಗಿ ಸಮಯಾವಕಾಶಕ್ಕಾಗಿ ಮುಂಬೈಗೆ ತೆರಳಿರಬಹುದು ಎನ್ನಲಾಗುತ್ತಿದೆ.
ರಾಜ್ಯಪಾಲರ ನಿರ್ಗಮನ ವಿಚಾರವನ್ನು ಪ್ರತಿಪಕ್ಷಗಳು ಟೀಕಿಸಿದ್ದು, ಕರ್ನಾಟಕದಲ್ಲಿ ಅಸಂವಿಧಾನಿಕ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆರೋಪಿಸಿದೆ. ರಾಜ್ಯಪಾಲರು ತಕ್ಷಣ ಹಿಂತಿರುಗಬೇಕೆಂದು ಆಗ್ರಹಿಸಿದೆ. ಸಿದ್ದರಾಮಯ್ಯ ತಾಂತ್ರಿಕ ಕಾರಣ ನೀಡಿ ಹುದ್ದೆಯಲ್ಲೇ ಮುಂದುವರಿಯಲು ಹವಣಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.


