Menu

ಬೀದರ್‌ ಪಶು ವೈದ್ಯಕೀಯ ವಿವಿಯಲ್ಲಿ ಬಹುಕೋಟಿ ಹಗರಣ: ಆರು ಮಂದಿಯ ಬಂಧನ

2017-18ರ ಅವಧಿಯಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಬಂಧಿಸಿದ್ದಾರೆ.

ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಬಂಧಿತರು.

ವಿಶ್ವವಿದ್ಯಾಲಯದ ಸಾಮಗ್ರಿ ಖರೀದಿಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ 45 ಕೋಟಿ ರೂ.ಗೂ ಅಧಿಕ ಹಣ ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. 2021ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಕಳೆದ 2025ರ ಸೆಪ್ಟೆಂಬರ್ 10ರಂದು ಏಕಕಾಲಕ್ಕೆ ರಾಜ್ಯದ 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಹಗರಣದಲ್ಲಿ ವಿವಿ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿಯವರು ಶಾಮೀಲಾಗಿ ಯಾವುದೇ ಸಾಮಗ್ರಿ ಖರೀದಿಸದೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿರುವುದು ಸಾಬೀತಾಗಿದೆ. ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ವಾರೆಂಟ್ ಹೊರಡಿಸಿದ ಬಳಿಕ ಲೋಕಾಯುಕ್ತ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಣೇಶ್ವರ ಹಾಗೂ ಎಸ್ಪಿ ಸಿ ಮತ್ತು ಟಿ ಬದ್ರಿನಾಥ್ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ.

Related Posts

Leave a Reply

Your email address will not be published. Required fields are marked *