ಸ್ಥಳೀಯ ಪತ್ರಿಕೆಗಳು ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಿದೆ. ಸ್ಥಳೀಯ ಮತ್ತು ಸಣ್ಣ ಪತ್ರಿಕೆಗಳಿಗೆ ಜಾಹಿರಾತಿನಲ್ಲಿ ತೊಂದರೆ ಆಗಬಾರದು ಎನ್ನುವ ನಿಲುವು ಮುಖ್ಯಮಂತ್ರಿಗಳದ್ದೂ ಆಗಿದೆ, ನನ್ನದೂ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್ ಹೇಳಿದ್ದಾರೆ.
ಮಾಧ್ಯಮ ಸಲಹೆಗಾರ ಹೊಣೆಗಾರಿಕೆ ಹೂವಿನ ಹಾದಿ ಅಲ್ಲ, ಮುಳ್ಳಿನ ಹಾಸಿಗೆ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆ ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ “ಮಾಧ್ಯಮ ಸಂವಾದ”ದಲ್ಲಿ ಮಾತನಾಡಿದರು.
ಮಾಧ್ಯಮ ಸಲಹೆಗಾರ ಹುದ್ದೆ ಪ್ರತೀ ದಿನ ಸವಾಲಿನದ್ದು. ಬೆಳಗ್ಗೆ ಎದ್ದು ಪತ್ರಿಕೆಗಳನ್ನು ತಿರುವಿ ಹಾಕುವವರೆಗೂ ನನಗೆ ದುಗುಡ ಇದ್ದೇ ಇರುತ್ತದೆ. ಈ ಸವಾಲುಗಳನ್ನು ಪ್ರತೀ ದಿನ ನಿರ್ವಹಿಸುತ್ತಿದ್ದೇನೆ ಎನ್ನುವ ಸಮಾಧಾನ ಕೂಡ ಇದೆ. ಆದರೆ, ನನಗೆ ಒದಗಿ ಬಂದಿರುವ ಹೊಣೆಗಾರಿಕೆ ಬಗ್ಗೆ ನನಗೆ ಯಾವತ್ತೂ ಭ್ರಮ ನಿರಸನ ಆಗಿಲ್ಲ ಎಂದರು.
ಇವತ್ತಿನವರೆಗೂ ಮುಖ್ಯಮಂತ್ರಿಗಳು ಒಂದು ದಿನ ಕೂಡ, ” ತಮ್ಮ ವಿರುದ್ಧ ಇಂಥಾ ಚಾನಲ್ ನಲ್ಲಿ ಸುದ್ದಿ ಬಂದಿದೆ. ನೋಡು” ಎನ್ನುವ ಒಂದು ಮಾತನ್ನೂ ಹೇಳಿಲ್ಲ. ಮಾಧ್ಯಮ ಸ್ವಾತಂತ್ರ್ಯಕ್ಕೆ ಮುಖ್ಯಮಂತ್ರಿಗಳು ಯಾವತ್ತೂ ಧಕ್ಕೆ ಆಗದಂತೆ ನೋಡಿಕೊಂಡಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ವಿಧಿಸಿರುವ ಕಠಿಣವಾದ ಎರಡು ಷರತ್ತು ಸಡಿಲಗೊಳಿಸಲು ಸಭೆ ಮಾಡಿ ತೀರ್ಮಾನಿಸಲಾಗಿದೆ. ಇದರಿಂದ ಆರು ಸಾವಿರಕ್ಕೂ ಹೆಚ್ಚಿನ ಪತ್ರಕರ್ತರಿಗೆ ಸವಲತ್ತು ಸಿಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಮಾಧ್ಯಮ ಸಂಸ್ಥೆಗಳು, ಪತ್ರಕರ್ತರ ಸಂಘಟನೆಗಳು ಮತ್ತು ಪತ್ರಕರ್ತ ಸಮುದಾಯದ ಒತ್ತಡದಿಂದಲೇ ರಾಜ್ಯದಲ್ಲಿ ‘ಜಾಹಿರಾತು ನೀತಿ’ ತರಲಾಗಿದೆ. ವೃತ್ತಿಪರವಾಗಿ ಕಷ್ಟಪಟ್ಟು ಪತ್ರಿಕೆ ಮಾಡುವವರಿಗೆ ನೆರವಾಗಬೇಕು ಎನ್ನುವ ಕಾಳಜಿ ಜಾಹಿರಾತು ನೀತಿಯ ಹಿಂದಿದೆ. ಜಾಹಿರಾತಿ ದರ ಪರಿಷ್ಕರಣೆ ಕೂಡ ಚರ್ಚೆಯಲ್ಲಿದೆ ಎಂದರು.
ಪತ್ರಿಕೆಗಳಿಗೆ ಜಾಹಿರಾತು ನೀಡುವ ವಿಚಾರದಲ್ಲಿ ಕೆಲವು ಸಮುದಾಯಗಳಿಗೆ ಮಾತ್ರ ಕೆನೆ ಪದರದ ಮಿತಿ ಹಾಕಿದ್ದು, ಒಂದು ಸಮುದಾಯಕ್ಕೆ ಮಾತ್ರ ಕೆನೆಪದರ ಇಲ್ಲದಿರುವುದರಿಂದ ಬಹುತೇಕ ಸಮುದಾಯಗಳ ಮಾಲೀಕರು, ಸಂಪಾದಕರುಗಳು ವಿಪರೀತ ನಷ್ಟ ಅನುಭವಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಲೋಪಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜಾಹಿರಾತು ನೀತಿಯಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದು ತಿಳಿಸಿದರು.
ತಮಗೆ ಸಿಗುವ ಸಾರ್ವಜನಿಕ ಸನ್ಮಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಲಾರದ ಪತ್ರಕರ್ತರು ಮತ್ತು ರಾಜ್ಯದ ಪತ್ರಕರ್ತ ಸಮುದಾಯಕ್ಕೆ ಅರ್ಪಿಸಿದ ಕೆ.ವಿ.ಪ್ರಭಾಕರ್ ಅವರು, ಇದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಪತ್ರಕರ್ತ ಸಮುದಾಯಕ್ಕೆ, ಪತ್ರಿಕಾ ವಿತರಕ ಸಮುದಾಯಕ್ಕೆ ನೆರವಾಗುವ ಜೊತೆಗೆ ನೂರಾರು ರೀತಿಯ ನೆರವು ಸರ್ಕಾರದಿಂದ ಒದಗಿಸಲಾಗಿದೆ. ಇವುಗಳ ಆಚೆಗೆ ನಾನು ಓದಿದ ಶಾಲೆಗೆ ಸರ್ಕಾರದ ನೆರವು ಒದಗಿಸಲು ಸಾಧ್ಯವಾಗಿದ್ದು, ಈ ಸರ್ಕಾರಿ ಶಾಲೆಗೆ ಮರುಜೀವ ಬಂದು ವಿದ್ಯಾರ್ಥಿಗಳ ಸಂಖ್ಯೆ 100ರ ಗಡಿ ದಾಟಿರುವುದು ಸಮಾಧಾನ ತಂದಿದೆ ಎಂದರು.
KUWJ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ರಾಜ್ಯ ಪದಾಧಿಕಾರಿಗಳಾದ ಸೋಮಶೇಖರ್ ಕೆರಗೋಡು, ವಾಸುದೇವ ಹೊಳ್ಳ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.


