ಮಗಳು ಯುವಕನೊಬ್ಬನನ್ನು ಪ್ರೀತಿಸಿ ಮನೆತನದ ಗೌರವಕ್ಕೆ ಕುಂದು ಮಾಡುತ್ತಿದ್ದಾಳೆಂದು ಸಿಟ್ಟಿಗೆದ್ದ ತಂದೆ ಆಕೆಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.’
ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತಿಮ್ಮರಾಯಪ್ಪ ಬಂಧಿತ ಆರೋಪಿ. ನಿಂಬೆ ಮರದಹಳ್ಳಿಯ ಮೇಘನ (17) ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಾಯಿ ತಿಂಗಳ ಹಿಂದೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಬಾಲಕಿಯ ತಂದೆ ತಲೆ ಮರೆಸಿಕೊಂಡಿದ್ದ. ಆತನ ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮಗಳು ಮೇಘನಾ ತನ್ನ ತಾಯಿ ಕಡೆಯ ಸಂಬಂಧಿಯನ್ನು ಪ್ರೀತಿಸುತ್ತಿದ್ದಳು. ತಂದೆ ತಿಮ್ಮರಾಯಪ್ಪ ಮಗಳ ಇದನ್ನು ವಿರೋಧಿಸಿದ್ದು, ಈ ವಿಚಾರವಾಗಿ ತಂದೆ-ಮಗಳ ನಡುವೆ ಮನೆಯಲ್ಲಿ ಅನೇಕ ಬಾರಿ ಜಗಳವಾಗಿದೆ. ಏಪ್ರಿಲ್ 16ರಂದು ಗಳವಾಗಿದ್ದು, ಮಗಳು ಮಾತು ಕೇಳುತ್ತಿಲ್ಲ ಎಂದು ಕೋಪಗೊಂಡ ತಿಮ್ಮರಾಯಪ್ಪ ಕೊಲೆ ಮಾಡಿ ಜಮೀನಿನ ಪಕ್ಕದ ಸರ್ಕಾರಿ ಹಳ್ಳದಲ್ಲಿ ಶವ ಹೂತಿದ್ದ.
ಮಗಳು ಕಾಣೆಯಾಗಿದ್ದಾಳೆಂದು ತಾಯಿ ನಾಪತ್ತೆ ದೂರು ದಾಖಲಿಸಿದ್ದರು. ಕಳ್ಳಂಬೆಳ್ಳ ಪೊಲೀಸರು ಪ್ರಕರಣ ಭೇದಿಸಿದ್ದು, ಮೇ 18ರಂದು ಮಧುಗಿರಿ ಉಪ ವಿಭಾಗಾಧಿಕಾರಿ ಹಾಗೂ ಶಿರಾ ತಹಸೀಲ್ದಾರ್ ನೇತೃತ್ವದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


