Menu

ಟ್ರ್ಯಾಕ್ಟರ್‌ನಲ್ಲಿ ಹುಲಿಗೆಮ್ಮ ದರ್ಶನಕ್ಕೆ ಹೋಗುತ್ತಿದ್ದಾಗ ಟ್ಯಾಂಕರ್‌ ಡಿಕ್ಕಿ: ಏಳು ಮಂದಿ ಸಾವು

ದೇವಿಯ ವಾರವೆಂದು ಮುನಿರಾಬಾದ್‌ನ ಹುಲಿಗೆಮ್ಮತಾಯಿ ದರ್ಶನಕ್ಕೆ ಹೊರಟವರು ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ  ಘಟನೆ  ಕೊಪ್ಪಳ-ವಿಜಯನಗರ ಜಿಲ್ಲೆಯ ಗಡಿಭಾಗದ ಮುನಿರಾಬಾದ್ ಸೇತುವೆ ಬಳಿ ಶುಕ್ರವಾರ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾನಳ್ಳಿಯಿಂದ ಹಲವು ಜನರು ಟ್ರ್ಯಾಕ್ಟರ್‌ನಲ್ಲಿ ಹುಲಿಗೆಮ್ಮದೇವಿ ದರ್ಶನಕ್ಕೆಂದು ಹೊರಟಿದ್ದರು. ಇನ್ನೈದು-ಹತ್ತು ನಿಮಿಷಗಳಲ್ಲಿ ದೇವಿಯ ಸನ್ನಿಧಾನದಲ್ಲಿರಬೇಕಿತ್ತು. ಅಷ್ಟರಲ್ಲಿ  ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಮಸಣದ ಪಾಲಾಗುವಂತೆ ಮಾಡಿದ. ಮುಂದಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟ್ಯಾಂಕರ್ ಗುದ್ದಿದ ಪರಿಣಾಮ ಸೇತುವೆ ಕೆಳಕ್ಕೆ ಟ್ರ್ಯಾಕ್ಟರ್ ಬಿದ್ದು  ಏಳು ಜನರ ಪ್ರಾಣ ಹೋಗಿದೆ.

ಘಟನೆಯಲ್ಲಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತ ನಗರ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ (35), ಮಹಾಂತೇಶ್ (18) ಭರತ್ (01) ಸವಿತಾ (12) ಮಾರೇಶ್, ಗೀತಾ ಹಾಗೂ ಗೌರಮ್ಮ  ಮೃತಪಟ್ಟವರು.

ಪೊಲೀಸ್ ಅಧಿಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಶ್ರಮಿಸಿದ್ದಾರೆ. ಬಳ್ಳಾರಿ-ವಿಜಯನಗರ ಕ್ಷೇತ್ರದ ಸಂಸದ ಇ.ತುಕಾರಾಂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸಂಸದ ತುಕಾರಾಂ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಘಟನೆ ಕುರಿತಂತೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಪಘಾತದಲ್ಲಿ ಪವಾಡ ಸದೃಶ ರೀತಿಮೂರು ವರ್ಷದ ಬಾಲಕಿ ಮಹಾಲಕ್ಷ್ಮಿ ಪಾರಾಗಿದ್ದಾಳೆ. ಬಾಲಕಿ ಮಹಾಲಕ್ಷ್ಮೀಯ ತಾಯಿ ಗೀತಾ ಹಾಗೂ ಸಹೋದರ ಭರತ್ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ನಡೆದ ಅಪಘಾತದಲ್ಲಿ ಏಳು ಜನ  ಮೃತಪಟ್ಸಾಟಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೂ ಒಂದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕಿಸಿದ್ದಾರೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಕೆಲವೊಂದು ಕಡೆ ರಸ್ತೆಗಳು ಕಿರಿದಾಗಿವೆ. ರಸ್ತೆ ಅಗಲೀಕರಣ, ಸೇತುವೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಸೇತುವೆ ಎರಡೂ ಬದಿಗಳು ಅಪಘಾತ ವಲಯಗಳಲ್ಲಿ ಬರುತ್ತದೆ. ಇಂತಹ ಪ್ರದೇಶಗಳಲ್ಲಿ ಸಂಚಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.

ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಹತ್ತಿಸಿಕೊಂಡು ಬರುವುದು ಹಾಗೂ ಟಿಪ್ಪರ್ ಲಾರಿಗಳು ವೇಗವಾಗಿ ಚಲಿಸುವುದು ಸಾಮಾನ್ಯವಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸ ಇಲಾಖೆ ಕಟ್ಟುನಿಟ್ಟನ ಕ್ರಮ ಕೈಗೊಂಡಿದ್ದರೇ ಈ ರೀತಿಯ ಅಪಘಾತಗಳನ್ನು ತಪ್ಪಿಸಬಹುದಿತ್ತು. ಅಪಘಾತ ವಲಯಗಳಲ್ಲಿ ಸಂಚಾರಿ ಪೊಲೀಸರ ನಿಯೋಜನೆ, ಸಾರಿಗೆ ಇಲಾಖೆಯ ಅಧಿಕಾರಿಗಳ ತಪಾಸಣೆ, ವೇಗದ ಮೇಲೆ ಮಿತಿ ಪಾದಚಾರಿಗಳಿಗೆ ಪ್ರತ್ಯೇಕ ಪಥ ಮತ್ತು ರಸ್ತೆ ಸುರಕ್ಷತಾ ಹಾಗೂ ಎಚ್ಚರಿಕೆ ಫಲಕಗಳನ್ನು ರಸ್ತೆ ಬದಿಗಳಲ್ಲಿ ಅಳವಡಿಸುವಂತಹ ಕ್ರಮಗಳನ್ನು ಈ ಕೂಡಲೇ ಕೈಗೊಳ್ಳಬೇಕು. ಹುಲಿಗಿಯ ಕಡೆಗೆ ಹೋಗುವ ಕಿರಿದಾದ ರಸ್ತೆಗಳ ಅಗಲೀಕರಣ ಮತ್ತು ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಈ ಕೂಡಲೇ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *