ಮುಂಬೈನ ಅಬ್ದುಲ್ಲಾ ಡೊಕಾಡಿಯಾ, ಪತ್ನಿ ನಸ್ರೀನ್ ಮಕ್ಕಳಾದ ಆಯೇಷಾ ಮತ್ತು ಜೈನಾಬ್ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದು ಮಲಗಿದ್ದವರು ಅಸ್ವಸ್ಥಗೊಂಡು ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣವಿತ್ತು ಎಂಬ ವಿಚಾರ ಬಯಲಾಗಿದೆ.
ಕುಟುಂಬಸ್ಥರು ತಾವೇ ವಿಷ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರಾ ಅಥವಾ ಯಾರಾದರೂ ಕೊಲೆ ಮಾಡಲು ಸಂಚು ಮಾಡಿದ್ದರಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರುಮೃತಪಟ್ಟಿದ್ದರು. ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರಿಂದಲೇ ಫುಡ್ ಪಾಯ್ಸನ್ ಆಗಿರಬಹುದು ಎಂಬ ಅನುಮಾನವಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಮೃತರ ದೇಹದಲ್ಲಿ ಇಲಿ ವಿಷ ಇರುವುದನ್ನು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಮೊಘಲ್ ಬಿಲ್ಡಿಂಗ್‌ನಲ್ಲಿರುವ ಕುಟುಂಬದ ನಿವಾಸದಿಂದ ಪೊಲೀಸರು ಎರಡು ಪ್ಯಾಕೆಟ್ ಇಲಿ ವಿಷ ಮತ್ತು ಇಲಿ ವಿಷದ ಸ್ಪ್ರೇ ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ಮೃತರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ವಿಷದ ಅಂಶ ಪತ್ತೆಹಚ್ಚಿವೆ.
ಡೊಕಾಡಿಯಾ ಕುಟುಂಬ ವಾಸವಿದ್ದ ಕಟ್ಟಡದಲ್ಲಿ ಇಲಿಗಳ ಉಪಟಳವಿತ್ತು, ಅದಕ್ಕಾಗಿ ಇಲಿ ಪಾಷಾಣ ಮನೆಯಲ್ಲಿಟ್ಟುಕೊಂಡಿರುವ ಸಾಧ್ಯತೆ ಇದೆ. ಅವರು ಸೇವಿಸಿದ್ದ ಹಣ್ಣಿನಲ್ಲಿ ವಿಷ ಇರುವುದು ದೃಢಪಟ್ಟಿರುವುದರಿಂದ ಪೊಲೀಸರ ತನಿಖೆಗೆ ಹೊಸ ತಿರುವು ಲಭಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಳೆದ ವಾರ ನಡೆದ ಪ್ರಾಥಮಿಕ ಫಾರೆನ್ಸಿಕ್ ಪರೀಕ್ಷೆಯಲ್ಲಿ ಮೃತರ ಅಂಗಾಗಳು ಹಸಿರು ಬಣ್ಣಕ್ಕೆ ತಿರುಗಿದ್ದವು ಎಂಬುದು ಕಂಡು ಬಂದಿತ್ತು. ವಿಷಪ್ರಯೋಗದ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳಿದ್ದರು. ಅಬ್ದುಲ್ಲಾ ಅಹದಲ್ಲಿ ಮಾರ್ಫಿನ್ ಎಂಬ ವೇದನಾ ನಿವಾರಕ ಔಷಧಿಯ ಗುರುತು ಪತ್ತೆಯಾಗಿದ್ದವು. ಇದು ವೈದ್ಯಕೀಯ ಚಿಕಿತ್ಸೆ ಅಥವಾ ಇನ್ನಾವುದೇ ಅನುಮಾನಾಸ್ಪದ ಕಾರಣಕ್ಕೆ ಸಂಬಂಧಿಸಿದ್ದೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪೊಲೀಸರು ಕುಟುಂಬದ ಊಟಕ್ಕೆ ಬಂದಿದ್ದ ಅತಿಥಿಗಳ ಹೇಳಿಕೆಗಳನ್ನು ದಾಖಲಿಸಿದ್ದರು. ಮಟನ್ ಪುಲಾವ್ ಸೇವಿಸಿದ್ದ ಅತಿಥಿಗಳಿಗೆ ತೊಂದರೆ ಆಗದ ಕಾರಣ, ತನಿಖಾಧಿಕಾರಿಗಳು ಕುಟುಂಬ ಸೇವಿಸಿದ್ದ ಕಲ್ಲಂಗಡಿ ಹಣ್ಣಿಗೆ ಸಂಬಂಧಿಸಿ ಹೆಚ್ಚಿನ ತನಿಖೆಗೆ ಆಸಕ್ತಿ ತೋರಿದ್ದರು.


