ಮೈತ್ರಿ ಎಂಬುದು ಕೇವಲ ಅಧಿಕಾರವನ್ನು ಪಡೆಯಲೆಂಬ ಪೊಲಿಟಿಕಲ್ ಅಡ್ಜಸ್ಟ್‌ಮೆಂಟ್ ಆಗಬಾರದು. ತಮಿಳುನಾಡಿನಲ್ಲಿ ಸರದಿ ಮೇರೆಗೆ ಅಧಿಕಾರವನ್ನು ಇದುವರೆಗೆ ಅನುಭವಿಸಿರುವ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಭವಿಷ್ಯದಲ್ಲಿ ಒಂದಾದರೆ, ಇದು ಪವರ್ ಪಾಲಿಟಿಕ್ಸ್ ಗಾಗಿ ಜನತೆಯ ಮುಂದೆ ಆಡುವ ಬೃಹನ್ನಾಟಕ ಎನ್ನದೆ ವಿಧಿಯಿಲ್ಲ. ಹೊಸದಾಗಿ ಪಕ್ಷಗಳನ್ನು ಕಟ್ಟುವುದು ಸರಿ. ಆದರೆ ಇಂತಹ ಪಕ್ಷಗಳ ದೀರ್ಘಕಾಲಿಕ ಉಳಿಗಾಲ ಹೇಗೆ ?
ತಮಿಳುನಾಡು ರಾಜಕೀಯವೂ ಈಗ ಸಿನಿಮುಯವಾಗಿದೆ ! ವಿಜಯ್ ಸಾರಥ್ಯದ ಟಿವಿಕೆ, ಏಕೈಕ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿದರೂ ಸರ್ಕಾರದ ರಚನೆಗೆ ಬೇಕಿರುವ ಸಂಖ್ಯಾಬಲ ಈ ಪಕ್ಷಕ್ಕೆ ದೊರೆತಿಲ್ಲ. ಬುಧವಾರದಂದು ಟಿವಿಕೆಗೆ ಬೆಂಬಲ ಘೋಷಿಸಿ ಕಾಂಗ್ರೆಸ್ ಪತ್ರ ನೀಡಿದ್ದು ಸರಿಯಷ್ಟೆ. ಆದರೆ ಎಡಪಕ್ಷಗಳು ಮತ್ತು ಪಿಎಂಕೆ ನೇತಾರರು ಖಚಿತ ಬೆಂಬಲ ಘೋಷಿಸದ ಕಾರಣ ಗುರುವಾರ ನಡೆಯಬೇಕಿದ್ದ ಸಿಎಂ ಪದಗ್ರಹಣ ಅಲ್ಲಿಗೇ ಸ್ಥಗಿತಗೊಂಡಿತು. ಒಟ್ಟಿನಲ್ಲಿ ಮತ ಎಣಿಕೆ ಬಳಿಕ ದ್ರಾವಿಡ ನಾಡಿನಲ್ಲಿ ಕ್ಷಿಪ್ರಗತಿಯಲ್ಲಿ ರಾಜಕೀಯ ಬೆಳವಣಿಗೆ ಮುಂದುವರಿದಿವೆ. ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡಿದೆ. ಇದೇ ವೇಳೆ ಅಣ್ಣಾ ಡಿಎಂಕೆಯ ಒಂದು ಬಣ ಟಿವಿಕೆ ಜೊತೆ ಕೈ ಜೋಡಿಸಲು ಮುಂದಾಗಿದೆ. ಮತ್ತೊಂದು ದಿಕ್ಕಿನಲ್ಲಿ ಕೆಲ ಅಣ್ಣಾ ಡಿಎಂಕೆ ನೂತನ ಸದಸ್ಯರು ಡಿಎಂಕೆ ಜೊತೆ ಕೈ ಜೋಡಿಸಲು ಮುಂದಾಗಿರುವುದು ಗಮನಾರ್ಹ.
ಪ್ರಜಾ ಪ್ರತಿನಿಧಿ ಕಾಯಿದೆ ಪ್ರಕಾರ ರಾಜ್ಯಪಾಲರು ಅತಿದೊಡ್ಡ ಏಕೈಕ ಪಾರ್ಟಿ ನಾಯಕನಿಗೆ ಸರ್ಕಾರ ರಚಿಸಲು ಮೊದಲ ಅವಕಾಶ ನೀಡಬೇಕು. ಟಿವಿಕೆ ಒಂದೇ ಮೂರಂಕಿ ( ೧೦೮) ದಾಟಿರುವ ಪಾರ್ಟಿ. ಈ ಪಕ್ಷದ ನಾಯಕ ಲೋಕಭವನದಲ್ಲಿಯೇ ತನಗಿರುವ ಬಹುಮತವನ್ನು ಸಾಬೀತು ಮಾಡಬೇಕೆಂಬುದು ಕಾನೂನಿನಲ್ಲಿ ಅಡಕವಾಗಿಲ್ಲ. ಈ ದಿಶೆಯಲ್ಲಿ ಸರ್ಕಾರ ರಚನೆಗೆ ಟಿವಿಕೆ ನಾಯಕನಿಂದ ಸಾಕ್ಷ್ಯಗಳನ್ನು ಕೇಳಿದ ತಮಿಳುನಾಡು ರಾಜ್ಯಪಾಲರ ನಿಲುವು ಪ್ರಶ್ನಾರ್ಹ. ಇದೇ ವೇಳೆ ಸರ್ಕಾರದ ರಚನೆಯ ಹಕ್ಕುಗಳನ್ನು ರಾಜ್ಯಪಾಲರ ಮುಂದಿಟ್ಟ ವಿಜಯ್, ಪಿಎಂಕೆ ಮತ್ತು ಎಡಪಕ್ಷಗಳ ಬೆಂಬಲವನ್ನು ಖಾತರಿಗೊಳಿಸಬೇಕಿತ್ತು . ಒಟ್ಟಿನಲ್ಲಿ ಪಿಎಂಕೆ ಮತ್ತು ಎಡಪಕ್ಷಗಳು ತಮ್ಮ ಬೆಂಬಲವನ್ನು ಖಚಿತಪಡಿಸಿದಲ್ಲಿ ಸರ್ಕಾರದ ರಚನೆಗೆ ಬೇಕಿರುವ ಮ್ಯಾಜಿಕ್ ಸಂಖ್ಯೆಯನ್ನು ಟಿವಿಕೆ ಪಡೆಯುವುದು ಕಷ್ಟವೇನಾಗದು.
ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಯಾವೊಂದು ಪಕ್ಷವೂ ತನ್ನ ಸ್ವಂತ ಬಲದ ಮೇಲೆ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಅದರಲ್ಲಿಯೂ ಮುಖ್ಯವಾಗಿಂದು ಪ್ರಾದೇಶಿಕ ಪಕ್ಷಗಳ ಅಬ್ಬರವನ್ನು ಸಂಪೂಣ ವಾಗಿ ಅದುಮಿಡಬೇಕೆಂಬ ಬಿಜೆಪಿಯ ಮಹಾ ಸಂಕಲ್ಪ ಮತ್ತು ರಾಜಕೀಯ ಚಾಣಾಕ್ಷ ನಡೆಗೆ ದ್ರಾವಿಡರು ಬಲವಾದ ಚಾಟಿಯೇಟು ನೀಡಿದ್ದಾರೆ. ಜಾತ್ಯತೀತ ಶಕ್ತಿಗಳನ್ನು ಮತ್ತು ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಈಗ ಟಿವಿಕೆ ಜೊತೆ ಕೈ ಜೋಡಿಸಬೇಕಿದೆ ಎಂದು ಹೇಳಿದೆ. ಇದೇ ವೇಳೆ ಡಿಎಂಕೆ ಅಂತಹ ಪಕ್ಷವೂ ಇದಕ್ಕೆ ಸಹಮತ ವ್ಯಕ್ತಪಡಿಸಬಹುದಲ್ಲವೇ? ಮೈತ್ರಿ ಎಂಬುದು ಕೇವಲ ಅಧಿಕಾರವನ್ನು ಪಡೆಯಲೆಂಬ ಪೊಲಿಟಿಕಲ್ ಅಡ್ಜಸ್ಟ್‌ಮೆಂಟ್ ಆಗಬಾರದು. ತಮಿಳುನಾಡಿನಲ್ಲಿ ಸರದಿ ಮೇರೆಗೆ ಅಧಿಕಾರವನ್ನು ಇದುವರೆಗೆ ಅನುಭವಿಸಿರುವ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಭವಿಷ್ಯದಲ್ಲಿ ಒಂದಾದರೆ, ಇದು ಪವರ್ ಪಾಲಿಟಿಕ್ಸ್ ಗಾಗಿ ಜನತೆಯ ಮುಂದೆ ಆಡುವ ಬೃಹನ್ನಾಟಕ ಎನ್ನದೆ ವಿಧಿಯಿಲ್ಲ. ಹೊಸದಾಗಿ ಪಕ್ಷಗಳನ್ನು ಕಟ್ಟುವುದು ಸರಿ. ಆದರೆ ಇಂತಹ ಪಕ್ಷಗಳ ಉಳಿಗಾಲ ಹೇಗೆ ? ಅಧಿಕಾರದ ಗದ್ದುಗೆ ಹಿಡಿಯುವ ಮುನ್ನವೇ ಟಿವಿಕೆ ಪಕ್ಷಕ್ಕೆ ಈ ಸವಾಲುಗಳು ಎದುರಾಗಿವೆ.


