Menu

26 ವರ್ಷದ ಮಹಿಳೆಯ ಮೋಹಕ್ಕೆ ಬಿದ್ದ 15 ವರ್ಷದ ಬಾಲಕ ಆತ್ಮಹತ್ಯೆ

26 ವರ್ಷದ ಮಹಿಳೆಯನ್ನು ಮದುವೆಯಾಗುವೆನೆಂದು ಹೊರಟಿದ್ದ 15 ವರ್ಷದ ಬಾಲಕ ಪೋಷಕರ ಬುದ್ಧಿವಾದಕ್ಕೆ ಬೇಸರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿಯಲ್ಲಿ ನಡೆದಿದೆ.

ಬಿಡದಿಯ ಭೂಮಿಕಾ ಪೃಥ್ವಿ ಲೇಔಟ್‌ನ ಆರ್. ತನ್ಮಯ್ ನಾಯಕ್ ಮೃತ ಬಾಲಕ. ಮಹಿಳೆಯನ್ನು ಮದುವೆಯಾಗಲು ಬಾಲಕ ಇಚ್ಛಿಸಿದ್ದ, ಆಕೆಯನ್ನು ಆಗಾಗ ಭೇಟಿ ಮಾಡದಂತೆ ಪೋಷಕರು ಬುದ್ದಿ ಹೇಳಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ಹೋಗಿ ಸ್ನೇಹಿತನ ಜೊತೆಗಿದ್ದ.

ಏಪ್ರಿಲ್ 24 ರಂದು ತನ್ಮಯ್ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ ಮೂರರಂದು ಮೃತಪಟ್ಟಿದ್ದಾನೆ. ಈ ಸಂಬಧ ಬಾಲಕನ ತಂದೆ ಸಿ. ರವಿ ನಾಯಕ್ ಮೇ 4 ರಂದು ಬಿಡದಿಯ ಎಚ್.ಎನ್. ಶೋಭಾ ಎಂಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಿಡದಿಯ ಖಾಸಗಿ ಶಾಲೆಯ ವಿದ್ಯಾರ್ಥಿ ತನ್ಮಯ್, ಶೋಭಾಗೆ ಹತ್ತಿರವಾಗಿದ್ದ ವಿಷಯ ತಿಳಿದ ನಂತರ ಅವರು ಮಾರ್ಚ್‌ನಲ್ಲಿ ಬಿಡದಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಕರೆಸಿ ಎಚ್ಚರಿಸಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಆಕೆ ಬಾಲಕನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ತನ್ಮಯ್‌ನ ಪೋಷಕರು ಅವಳೊಂದಿಗಿನ ಸಂಪರ್ಕ ಕಡಿದುಕೊಳ್ಳುವಂತೆ ಒತ್ತಾಯಿಸಿದ್ದಕ್ಕೆ ಬಾಲಕ 25 ದಿನಗಳ ಹಿಂದೆ ಮನೆ ಬಿಟ್ಟು ಸ್ನೇಹಿತನ ಮನೆಯಲ್ಲಿದ್ದ ಎನ್ನಲಾಗಿದೆ. ಶೋಭಾಳನ್ನು ಮದುವೆಯಾಗಲು ಬಯಸಿದ್ದೇನೆ, ಅವಳು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹುಡುಗ ತಂದೆಗೆ ಹೇಳಿದ್ದ.

ಏಪ್ರಿಲ್ 24 ರಂದು ಮಧ್ಯಾಹ್ನ ತನ್ಮಯ್ ಸ್ನೇಹಿತನ ಮನೆಯಿಂದ ತಾಯಿಗೆ ಕರೆ ಮಾಡಿ, ತಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ, ವಿಷ ಸೇವಿಸಿದ್ದೇನೆ ಎಂದು ತಿಳಿಸಿದ್ದಾನೆ. ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾನೆ. ಶೋಭಾ ಜೊತೆ ಜಗಳವಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಚಿಕಿತ್ಸೆಯ ಸಮಯದಲ್ಲಿ ಪೋಷಕರಿಗೆ ಹೇಳಿದ್ದಾನೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *