ಸೈಬರ್ ವಂಚಕರು ಎನ್‌ಐಎ ಅಧಿಕಾರಿಯ ಹೆಸರಿನಲ್ಲಿ ವೃದ್ಧೆಯೊಬ್ಬರನ್ನು ಬೆದರಿಸಿ 2.1 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣವು ಬೆಂಗಳೂರಿನ ಜಯನಗರದಲ್ಲಿ ಬೆಳಕಿಗೆ ಬಂದಿದೆ.
ನಿಮಗೆ ಪಿಎಫ್‌ಐ ಸಂಘಟನೆ ಜೊತೆ ಸಂಪರ್ಕ ಇದೆ ಎಂದು ಹೆದರಿಸಿದ ವಂಚಕರು ಬಂಧನ ಭೀತಿ ಹುಟ್ಟಿಸಿ ಬ್ಯಾಂಕ್ ಖಾತೆಗಳ ವಿವರ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ. ಮಹಿಳೆಗೆ ಏಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿಯು ತನ್ನನ್ನು ಎನ್‌ಐಎ ಅಧಿಕಾರಿ ಎಂದು ಹೇಳಿಕೊಂಡು ಆಕೆಯ ಹೆಸರಿನ ಡೆಬಿಟ್ ಕಾರ್ಡ್ ಅನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ.
ಪ್ರಕರಣ ಗಂಭೀರವಾಗಿದ್ದು, ಈ ವಿಚಾರವನ್ನು ಯಾರಲ್ಲೂ ತಿಳಿಸಬಾದರು ಎಂದು ಎಚ್ಚರಿಕೆ ನೀಡಿದ್ದ. ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಮಹಿಳೆಯ ಮಗಳೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವೀಡಿಯೊ ಕಾಲ್ ಮಾಡಿದ್ದ ವಂಚಕರು ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದರು. ಆರೋಪಿ ಎನ್‌ಐಎ ಅಧಿಕಾರಿ ಪ್ರದೀಪ್ ಜಸ್ವಾಲ್ ಎಂದು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡು ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಹೇಳಿದ್ದ. ಮಾತು ನಂಬಿದ ಮಹಿಳೆ ಎಲ್ಲ ಉಳಿತಾಯ, ಗೋಲ್ಡ್ ಲೋನ್ ಪಡೆದು ಹಣವರ್ಗಾಯಿಸಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ಹಲವು ಆರ್‌ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು 2.1 ಕೋಟಿ ಹಣವನ್ನು ವರ್ಗಾಯಿಸಿದ್ದರು.
ಬಳಿಕ ಆರೋಪಿಗಳು ಮತ್ತಷ್ಟು ಹಣ ಕೇಳಿದಾಗ ಮಹಿಳೆ ಓದರರಲ್ಲಿ ಹಣ ಕೇಳಿದ್ದಾರೆ, ಅನುಮಾನಗೊಂಡ ಅವರು ವಿಚಾರಿಸಿದಾಗ ವಂಚನೆ ಬಯಲಾಗಿದೆ. ಮಹಿಳೆ 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


