Menu

ಉಪಸಮರ: ಕೈ-ಕಮಲಕ್ಕೆ ಪಾಠವೇನು?

ಸೋಲು ಮತ್ತು ಗೆಲುವು ರಾಜಕಾರಣದಲ್ಲಿ ಯಾವಾಗಲೂ ಒಂದೇ ವಿಧವಾಗಿರುವುದಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರತಿನಿಧಿ ಆಯ್ಕೆ ಕುರಿತು ಹೇಗೆ ಆಲೋಚಿಸಿ ತೀರ್ಪು ನೀಡುವರೆಂಬುದಕ್ಕೆ ಈಗ ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ದಕ್ಕಿರುವ ಜನಾದೇಶವೇ ಸಾಕ್ಷಿ.

ಉಪಚುನಾವಣೆಗಳ ಫಲಿತಾಂಶದಿಂದ ಸರ್ಕಾರಗಳು ಉರುಳಿ ಹೋಗುವುದಿಲ್ಲ. ಇದು ಜನಾದೇಶವಂತೂ ಅಲ್ಲ. ಆದರೆ ರಾಜ್ಯದಲ್ಲಿ ಈಗ ನಡೆದಿರುವ ಎರಡು ವಿಧಾನಸಭೆ ಕ್ಷೇತ್ರಗಳ ಉಪಸಮರದ ಫಲಿತವಂತೂ ಹಲವು ಹತ್ತು ದಿಕ್ಕುಗಳಲ್ಲಿ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಇದರಿಂದ ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಗೆಲ್ಲುವ ವಿಶ್ವಾಸದಲ್ಲಿದ್ದ ರಾಜ್ಯ ಬಿಜೆಪಿಗೆ ಅಘಾತವಾಗಿದೆ. ಇವೆರೆಡೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದಂತಹ ಕ್ಷೇತ್ರಗಳು. ಆದರೆ ರಾಜ್ಯದಲ್ಲಿ ಈ ಎರಡು ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಿದಿದ್ದರೆ ಇದರ ಸಂದೇಶ ದಿಲ್ಲಿಗೆ ಸಕಾರಾತ್ಮಕವಾಗಿ ರವಾನೆಯಾಗುತ್ತಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲನ್ನು ರಾಜ್ಯದ ರಾಜಧಾನಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಿಸುವ ಬಿಜೆಪಿ ನಾಯಕರು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಆಗಿರುವ ಘೋರ ಸೋಲಿಗೆ ಈಗ ಯಾವ ಕಾರಣ ನೀಡುವರು ? ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ದ ಜನತೆಯಲ್ಲಿ ಒಂದು ರೀತಿಯಾದ ಅಸಮಾಧಾನ ಮತ್ತು ಅತೃಪ್ತಿ ಇದ್ದರೂ ಇದನ್ನು ಕನಿಷ್ಠ ಉಪ ಸಮರದ ಸಮಯದಲ್ಲಿ ಇದು ಪರಿಣಾಮ ಬೀರುವ ಹಾಗೆ ರಾಜ್ಯ ಬಿಜೆಪಿ ನಾಯಕರು ಮುತುವರ್ಜಿ ವಹಿಸಬೇಕಿತ್ತು. ಈ ದಿಶೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರ ಬಳಿಕ ಓರ್ವ ಸಮರ್ಥ ನಾಯಕ ಇಲ್ಲ ಎಂಬ ಸಂದೇಶವಂತೂ ಈಗ ನರೇಂದ್ರ ಮೋದಿ ಮತ್ತು ಅಮಿತ್‌ಶಾ ಪಾಳೆಯಕ್ಕೆ ಸ್ಪಷ್ಟವಾಗಿ ರವಾನೆಯಾಗಿದೆ.

ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಸಂಪೂಣ ವಾಗಿ ಕಾಂಗ್ರೆಸ್ ವಿರುದ್ದ ಬಂಡೆದ್ದಿರುವುದು ಚುನಾವಣೆಯ ಫಲಿತಾಂಶದಿಂದ ಬಯಲಾಗಿದೆ. ಇದು ದೇಶದ ಇತರ ಕಡೆ ಇರುವ ಮುಸ್ಲಿಂ ಮತದಾರರ ಮೇಲೆ ಕೂಡಾ ಪ್ರಭಾವ ಬೀರುವಂತಹದು. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಅತಿ ಕಡಿಮೆ ಅಂತರದಿಂದ ಗೆದ್ದಿರುವುದು ಗಂಭೀರ. ಅಲ್ಲದೆ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಪ್ರಮಾಣವೇ ಅಧಿಕವಾಗಿದ್ದು ತಮಗೇ ಸೀಟು ಕೊಡಬೇಕೆಂದು ರಚ್ಚೆ ಹಿಡಿದ ಮುಸ್ಲಿಂ ಬಣಕ್ಕೆ ಕಾಂಗ್ರೆಸ್ ಸಮಾಧಾನ ಮಾಡಿದರೂ ಈಗ ಬಂದಿರುವ ಫಲಿತಾಂಶ ಪಕ್ಷಕ್ಕೆ ಶಾಕ್ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭವಿಷ್ಯದಲ್ಲಿ ಇಂತಹ ಕಡೆ ಕಾಂಗ್ರೆಸ್ ಗೆಲ್ಲುವುದು ಅತಿ ಕಷ್ಟವಾದೀತು. ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿ ಪಕ್ಷದ ಅತಿರಥ ಮಹಾರಥರೆಲ್ಲರೂ ಚುನಾವಣೆ ಸಮಯದಲ್ಲಿ ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ಮಾಡಿದರೂ ಕೊನೆಗೆ ಕಾಂಗ್ರೆಸ್ ಅಭ್ಯರ್ಥಿಗೆ ದಕ್ಕಿದ್ದು ಪ್ರಯಾಸದ ಗೆಲುವು!

ಸೋಲು ಗೆಲುವು , ರಾಜಕಾರಣದಲ್ಲಿ ಯಾವಾಗಲೂ ಒಂದೇ ಆಗಿರುವುದಿಲ್ಲ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರತಿನಿಧಿ ಕುರಿತು ಹೇಗೆ ಆಲೋಚಿಸಿ ತೀರ್ಪು ನೀಡುವರೆಂಬುದಕ್ಕೆ ಈಗ ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ದಕ್ಕಿರುವ ಪ್ರಜಾ ತೀರ್ಪು ಸಾಕ್ಷಿ. ಜಾತಿ, ಪಂಥ ಹಾಗೂ ಹಣಬಲ ತೋಳ್ಬಲವನ್ನು ಜನತೆ ಚುನಾವಣೆಗಳ ಸಮಯದಲ್ಲಿ ಅತಿ ಮೌನವಾಗಿಯೇ ತಿರಸ್ಕರಿಸವರೆಂಬುದಕ್ಕೂ ಇದು ನಿದರ್ಶನ.

Related Posts

Leave a Reply

Your email address will not be published. Required fields are marked *