Menu

ವಿಜಯ್ ಮುಂದಿದೆ ನಾನಾ ರಾಜಕೀಯ ಸವಾಲುಗಳು

ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ವಿಜಯ್ ಸರ್ಕಾರವೂ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಎದುರಿಸಿದ ಸಮಸ್ಯೆಗಳನ್ನೇ ಎದುರಿಸಬೇಕಾದೀತು . ಕೇಂದ್ರದೊಂದಿದೆ ಸಂಘರ್ಷವಂತೂ ತಪ್ಪಿದ್ದಲ್ಲ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಿಜೆಪಿ ಅಂತಹ ಮಹತ್ವಾಕಾಂಕ್ಷಿ ರಾಷ್ಟ್ರೀಯ ಪಕ್ಷದ ಪಾಲಿಗೆ ಜೀರ್ಣಿಸಿ ಕೊಳ್ಳಲಾಗದಂತಹ ಬಿಸಿತುಪ್ಪ ಎಂಬುದಂತೂ ಕಟುಸತ್ಯ.

ಪ್ರಜಾತಂತ್ರದಲ್ಲಿ ಜನಾಕ್ರೋಶ ಎಂಬುದು ಮೌನಕ್ರಾಂತಿ. ಇಂತಹ ಕ್ರಾಂತಿ ಸಂಭವಿಸಿವುದುಂಟು . ದುರಾಡಳಿತದಿಂದ ಬೇಸತ್ತ ಜನತೆ ನಿರಂಕುಶಿಗಳನ್ನು ನಿರಾಕರಿಸುವುದರಲ್ಲಿ ಅನುಮಾನವಿಲ್ಲ. ಇದು ಜಾತಿ, ಮತ, ವರ್ಗ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ.

ಸಿನಿಮಾ ತಾರೆ ವಿಜಯ್, ತಮಿಳುನಾಡಿನಲ್ಲಿ ಹೀಗೊಂದು ಭರ್ಜರಿ ದಾಖಲೆ ಬರೆಯುವರೆಂದು ಯಾರೂ ಊಹಿಸಿರಲಿಲ್ಲ. ರಾಜಕೀಯ ಪಂಡಿತರು ಮತ್ತು ವಿಶ್ಲೇಷಕರು ಸಂಪ್ರದಾಯಿಕ ರಾಜಕೀಯ ಪಕ್ಷಗಳನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಲೆಕ್ಕವೇ ಈಗ ಬುಡಮೇಲು. ಇದರರ್ಥ , ಇಂದಿನ ಡಿಜಿಟಲ್‌ಯುಗದಲ್ಲಿ ಕೂಡಾ ಮತದಾರ ನೀಡುವ ಓಟು ಅಕ್ಷರಶಃ ಗುಂಡೇಟಿನ ಮಾದರಿಯಲ್ಲಿ ಸೋಲುಂಡ ನಾಯಕನ ಎದೆಗೆ ನಾಟುವುದು ಖಚಿತ.

ಟಿವಿಕೆ ಪಾರ್ಟಿ ಜನ್ಮಿಸಿದ ಮೊದಲ ಪ್ರಯತ್ನದಲ್ಲಿಯೇ ಚುನಾವಣೆ ಎಂಬ ಬಹುದೊಡ್ಡ ಪರೀಕ್ಷೆಯಲ್ಲಿ ಸರಕಾರವನ್ನು ರಚಿಸುವಷ್ಟು ಸೀಟುಗಳನ್ನು ಸಂಪಾದಿಸುವುದೆಂದರೆ ಅದು ಸುಲಭದ ಮಾತಲ್ಲ. ಈ ದಿಶೆಯಲ್ಲಿ ವಿಜಯ್ ಒಂದು ದಾಖಲೆ ಬರೆದಿರುವುದು ಕಟುಸತ್ಯ.

ಟಿವಿಕೆ ವಿಜಯಕ್ಕೆ ಸಿನಿಮಾ ವರ್ಚಸ್ಸು ಕಾರಣವೇ ? ಎಂಜಿಆರ್ ಜಯಲಲಿತಾ ಮಾದರಿಯಲ್ಲಿ ಇವರು ಇಲ್ಲಿನ ಮತದಾರರನ್ನು ಸಮೂಹ ಸನ್ನಿಗೆ ಒಳಪಡಿಸಿದರೆ? ಅಥವಾ ಇಲ್ಲಿನ ಜನತೆ ಒಂದು ಬದಲಾವಣೆ ಇರಲಿ ಎಂಬ ದೃಷ್ಟಿಯಿಂದ ಮತ ಚಲಾಯಿಸಿದರೆ ಎಂಬ ಪ್ರಶ್ನೆಗಳೀಗ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದೇನೆ ಇರಲಿ. ಸಾಮಾಜಿಕ ತಾಣಗಳ ಪರಿಣಾಮ ಮತ್ತು ೧೮ ರಿಂದ ೩೦ ಯುವ ಮತದಾರನು, ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಿಂದ ಪಕ್ಷಕೆ ವಿಜಯ ಲಭಿಸುವಂತಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಮತದಾರರು ಮತ ಚಲಾಯಿಸಿದ ವೈಖರಿ ನೋಡಿದಾಗ ಪ್ರಜಾತಂತ್ರದ ಮೂಲಶಕ್ತಿ ಏನೆಂಬುದರ ಅರಿವಾಗುವುದು ಸಹಜ.
ಪಾರ್ಟಿಬಲ , ಜಾತಿಬಲ, ತೋಳ್ಬಲ ಮತ್ತು ಹಣಬಲವೇ ಇಂದಿನ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಸುಳ್ಳಲ್ಲ. ಆದರೆ ಇದಾವುದನ್ನೂ ಮತದಾರನು ಲೆಕ್ಕಿಸದೆ ಮತ ಚಲಾಯಿಸಲು ಸಾಧ್ಯ ಎಂಬುದಕ್ಕೆ ವಿಜಯ್ ಸಾಧಿಸಿರುವ ಈ ಗೆಲುವು ಸಾಕ್ಷಿ.

ಈ ಬದಲಾವಣೆ ಒಳ್ಳೆಯದೇ. ಆದರೆ ಇದು ದೀರ್ಘಕಾಲಿಕವಾಗಿ ಜನಮಾನಸದಲ್ಲಿ ನೆಲೆಗೊಂಡರೆ ಒಳಿತು . ಕೇವಲ ಸಿನಿಕವಾದಗಳಿಗೆ ಇದು ಬಲಿಯಾದರೆ ಇಂದು ಜನಿಸಿದ ಹೊಸ ಪಾರ್ಟಿಯ ಆಯಶ್ಸು , ಅಲ್ಪಕಾಲೀನವಾಗುವ ಅಪಾಯವುಂಟು. ಈ ದಿಶೆಯಲ್ಲಿ ಟಿವಿಕೆ ಮುಂದೆ ಹಲವು ಹತ್ತು ಸವಾಲುಗಳಿವೆ.ಬಿಜೆಪಿಗೆ ಜೈ ಎನ್ನದ ಹೊರತು ಟಿವಿಕೆ ಹೇಗೆ ಕೇಂದ್ರ ಸರ್ಕಾರದ ಅನುದಾನ ಪಡೆಯಲು ಸಾಧ್ಯ? ಇಲ್ಲಿಯವರೆಗೆ ಡಿಎಂಕೆ ಎದುರಿಸಿದ ಸವಾಲುಗಳನ್ನೇ ಭವಿಷ್ಯದಲ್ಲಿ ವಿಜಯ್ ಸರ್ಕಾರವೂ ಎದುರಿಸಬೇಕಾದೀತು. ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ವಿಜಯ್ ಕೂಡಾ ಮುಂದೆ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಎದುರಿಸಿದ ಸಮಸ್ಯೆಗಳನ್ನೇ ಎದುರಿಸಬೇಕಾದೀತು .  ತಮಿಳುನಾಡಿನಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಎಂಬುದು ಸರ್ವಸತ್ಯ.

Related Posts

Leave a Reply

Your email address will not be published. Required fields are marked *