ಹೊಸ ಕಾರು ಖರೀದಿಸಿ ಊರಿಗೆ ಬಂದಿದ್ದ ಯುವಕನನ್ನು ಕೊಲೆ ಮಾಡಿ, ಮೃತದೇಹದ ಜೊತೆ ಕಾರಿಗೂ ಬೆಂಕಿ ಹಚ್ಚಿದ ಘಟನೆ ಬಾಗಲಕೋಟೆ ಜಿಲ್ಲೆಯ ಕನ್ನೋಳಿ ಗ್ರಾಮದಲ್ಲಿ
ನಡೆದಿದೆ.
ಆರೋಪಿಯ ಪತ್ನಿಯೊಂದಿಗೆ ಮೃತನಿಗೆ ಇದ್ದ ಅನೈತಿಕ ಅಂಬಂಧವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಮಲಿಂಗಪ್ಪ ಪಡಸಲಗಿ (೩೬) ಕೊಲೆಯಾದವನು. ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಕೊಲೆಯ ಮುಖ್ಯ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿಯೊಂದಿಗೆ ಸೋಮಲಿಂಗಪ್ಪಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯಿಂದ ಸದಾಶಿವ ಪಡಸಲಗಿ ಕೊಲೆ ಮಾಡಿದ್ದಾನೆ. ಈ ಹಿಂದೆಯಿಂದಲೂ ಇಬ್ಬರ ನಡುವೆ ವೈಷಮ್ಯವಿತ್ತು ಎಂದು ಹೇಳಲಾಗುತ್ತಿದೆ.
ಸೋಮಲಿಂಗಪ್ಪ ಹೊಸ ಕಾರು ಖರೀದಿಸಿ, ಪೂಜೆ ಮಾಡಿಸಿ ಊರಿಗೆ ಮರಳುತ್ತಿರುವಾಗ ಕನ್ನೋಳಿ ಗ್ರಾಮದ ಬಳಿ ಕಾದು ನಿಂತಿದ್ದ ಸದಾಶಿವ ಪಡಸಲಗಿ ಮತ್ತು ಅವನ ಸಹಚರರು ಬೇರೊಂದು ಕಾರಿನಲ್ಲಿ ಬಂದು ಸೋಮಲಿಂಗಪ್ಪನನ್ನು ತಡೆದಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಸೋಮಲಿಂಗಪ್ಪನಿಗೆ ಚಾಕು ಇರಿದು ಕೊಲೆ ಮಾಡಿ ಮೃತದೇಹದ ಜೊತೆಗೆ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


