ತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕವು ಜಾಗತಿಕ ನಾವೀನ್ಯತಾ ಕೇಂದ್ರ ಮತ್ತು ಹೂಡಿಕೆಯ ಆದ್ಯತಾ ತಾಣವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಬೆಂಗಳೂರು ಕೇವಲ ಭೇಟಿ ನೀಡುವ ನಗರವಲ್ಲ. ಕನಸುಗಳನ್ನು ಕಟ್ಟಿಕೊಳ್ಳುವ, ಭವಿಷ್ಯ ರೂಪಿಸುವ ನಗರವಾಗಿದೆ. ಎಲ್ಲರನ್ನೂ, ಎಲ್ಲದನ್ನೂ ಸ್ವಾಗತಿಸುವ ಅದರ ಮುಕ್ತ ಧೋರಣೆ, ಸದೃಢ ಪರಿಸರ ವ್ಯವಸ್ಥೆ ಮತ್ತು ಉತ್ತಮ ಜೀವನಮಟ್ಟದಿಂದ ಜಾಗತಿಕ ಪ್ರತಿಭೆ, ನಾವೀನ್ಯತೆ ಹಾಗೂ ಹೂಡಿಕೆಗಳನ್ನು ನಿರಂತರವಾಗಿ ಸೆಳೆಯುತ್ತಾ, ಅವಕಾಶಗಳ ನಗರವಾಗಿ ಮುಂದುವರಿಯುತ್ತಿದೆ ಎಂದರು.
ನಾವೀನ್ಯತೆ ನೇತೃತ್ವದಲ್ಲಿನ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆ ಕುರಿತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕರ್ನಾಟಕವು ಬಂಡವಾಳ ಹೂಡಿಕೆಗಷ್ಟೇ ಸೀಮಿತ ʼಸುಪ್ತ ಲುದಾರಿಕೆʼಯಲ್ಲಿ ಆಸಕ್ತಿ ಹೊಂದಿರದೆ ದೀರ್ಘಾವಧಿಯ ನಿರ್ದಿಷ್ಟ ಫಲಿತಾಂಶ ಆಧಾರಿತ ನಾವೀನ್ಯತೆಯ ಸಹಯೋಗಗಳನ್ನು ಕಾರ್ಯಗತಗೊಳಿಸಲು ನೆರವಾಗುವ ಪಾಲುದಾರರ ಹುಡುಕಾಟದಲ್ಲಿ ಇದೆ” ಎಂದು ಹೇಳಿದರು.
ಕರ್ನಾಟಕವು ತಂತ್ರಜ್ಞಾನ ಕೇಂದ್ರದಿಂದ ಜಾಗತಿಕ ನಾವೀನ್ಯತೆಯ ಪ್ರಮುಖ ಪಾಲುದಾರ ತಾಣವಾಗಿ ಅಭಿವೃದ್ಧಿಗೊಂಡಿದ್ದು, ನೀತಿ- ನಿರೂಪವಣೆಯ ನೆರವು, ನವೋದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಅಗತ್ಯ ಬೆಂಬಲ, ಸಂಶೋಧನಾ ಸಹಯೋಗ ಮತ್ತು ಮಾರುಕಟ್ಟೆ ಲಭ್ಯತೆ ಅವಕಾಶಗಳನ್ನು ಒದಗಿಸುವ ಮೂಲಕ, ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಆಕರ್ಷಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ವಿವಿಧ ದೇಶಗಳ ರಾಜತಾಂತ್ರಿಕರು ಬಣ್ಣಿಸಿದ್ದಾರೆ.
ʼಬೆಂಗಳೂರಿಗೆ ಸೇತುವೆʼ ಉಪಕ್ರಮದ ಮೂಲಕ ಕರ್ನಾಟಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿರುವುದನ್ನು ಶ್ಲಾಘಿಸಿದರು. ಇದು ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸಹಭಾಗಿತ್ವಗಳ ಮೇಲೆ ಕೇಂದ್ರೀಕೃತವಾಗಿದ್ದ, ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆದ ಭಾರತದ ಅತ್ಯಂತ ಪ್ರಮುಖ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ ಮತ್ತು ಎಲೆಕ್ಟ್ರಾನಿಕ್ಸ್, ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಜಾಗತಿಕ ಉದ್ಯಮ ದಿಗ್ಗಜರು ಭಾಗವಹಿಸಿದ್ದರು. 45ಕ್ಕೂ ಹೆಚ್ಚು ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಸೇರಿ 80ಕ್ಕೂ ಹೆಚ್ಚು ದೇಶಗಳರಾಜತಾಂತ್ರಿಕ ಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಜಾಗತಿಕ ಸಂಸ್ಥೆಗಳು ಮತ್ತು ಕೈಗಾರಿಕೆ ಮತ್ತು ಸರ್ಕಾರದ ಹಿರಿಯ ಪಾಲುದಾರರನ್ನು ಒಳಗೊಂಡ 140ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಸ್ವಿಟ್ಜರ್ಲೆಂಡ್, ಸೌದಿ ಅರೇಬಿಯಾ, ಡೆನ್ಮಾರ್ಕ್, ಫ್ರಾನ್ಸ್, ಈಜಿಪ್ಟ್, ಮಲೇಷ್ಯಾ, ಜಪಾನ್, ಜರ್ಮನಿ ಹಾಗೂ ಭೂತಾನ್ ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿದ್ದರು. ಹಲವಾರು ರಾಯಭಾರಿಗಳು ಮತ್ತು ಪ್ರತಿನಿಧಿಗಳು ಮಾತನಾಡಿ ಕರ್ನಾಟಕದ ಜೊತೆಗಿನ ವಿವಿಧ ದೇಶಗಳ ಗಾಢವಾದ ಮತ್ತು ಬೆಳೆಯುತ್ತಿರುವ ಪಾಲುದಾರಿಕೆಯ ಮೇಲೆ ಬೆಳಕು ಚೆಲ್ಲಿದರು. ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ) -ದಂತಹ ರಚನಾತ್ಮಕ ವೇದಿಕೆಗಳ ಮೂಲಕ ಭಾರತದ ನಾವೀನ್ಯತೆ ವ್ಯವಸ್ಥೆಯ ಜೊತೆ ಗಾಢ ಸಂಬಂಧವನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.


