ಬಾಡಿಗೆ ಮನೆಯಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸಿಡಿದು ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ದಾರುಣ ಘಟನೆಯೊಂದು ಆಂಧ್ರ ಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಕದಿರಿ ಮಂಡಲದ ಕುಮ್ಮರವಂದ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಫೋಟಕಗಳನ್ನು ಇರಿಸಲಾಗಿತ್ತು ಎನ್ನಲಾದ ಬಾಡಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಪಾಯದ ಅರಿವಿಲ್ಲದ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಸಹಾಯ ಮಾಡಲೆಂದು ಘಟನಾ ಸ್ಥಳಕ್ಕೆ ಬಂದಾಗ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸ್ಫೋಟಕಗಳ ಅಸುರಕ್ಷಿತ ಮತ್ತು ಅಕ್ರಮ ಸಂಗ್ರಹಣೆಯ ಬಗ್ಗೆ ಈ ಘಟನೆ ಕಳವಳಕ್ಕೆ ಕಾರಣವಾಗಿದೆ.
ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದ ದಿನಗೂಲಿ ಕೆಲಸಗಾರ ಮಧುಸೂಧನ್ ಸೇರಿದಂತೆ ನಾಲ್ವರು ಅಸು ನೀಗಿದ್ದರೆ, ಬೆಂಕಿಯ ತೀವ್ರತೆಗೆ ಗಾಳಿಯಲ್ಲಿ ಹಾರುತ್ತಿರುವ ಅವಶೇಷಗಳು ತಾಗಿ ಹಲವರು ಗಾಯಗೊಂಡಿದ್ದಾರೆ. ಸೆಕ್ರೆಟರಿಯೇಟ್‌ನಲ್ಲಿ ಅಧಿಕೃತ ಕೆಲಸದ ನಿಮಿತ್ತ ಪತ್ನಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಸೈಯದ್ ಅಸ್ಲಂ ಬಾಷಾ ಹೊಗೆಯನ್ನು ಕಂಡಾಗ ಸ್ಥಳಕ್ಕೆ ಧಾವಿಸಿದರು, ಸ್ಫೋಟದಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.
ಸ್ಫೋಟಕಗಳನ್ನು ಸಂಗ್ರಹಿಸಿದ್ದ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದ ಮಾಬುನ್ನಿಸಾ ಮನೆಯ ಗೋಡೆಗಳು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಏನಾಗ್ತಿದೆ ಎಂದು ನೋಡಲು ಹೊರಗೆ ಹೋದಾಗ ಈ ದುರಂತ ಎರಗಿದೆ. ಚಾಲಕ ವಿಶ್ವನಾಥ ರೆಡ್ಡಿ ಕರ್ತವ್ಯದಿಂದ ಮನೆಗೆ ಮರಳಿದ್ದರು, ಸ್ಫೋಟ ಸಂಭವಿಸಿದಾಗ ಸಹಾಯ ಮಾಡಲು ಧಾವಿಸಿ ಪ್ರಾಣ ಕಳೆದುಕೊಂಡಿದ್ದಾರೆ.
ಡಿಐಜಿ ಶಿಮೋಶಿ ನೇತೃತ್ವದ ಪೊಲೀಸ್ ತಂಡವು ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ. ಬಾಡಿಗೆ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸರಿಯಾಗಿ ಸಂಗ್ರಹಿಸದ ಕಾರಣ ಸ್ಫೋಟ ಸಂಭವಿಸಿದೆ ಎಂದು ವರದಿ ಸೂಚಿಸಿದೆ. ಈ ದುರಂತದಲ್ಲಿ ಸಂಬಂಧಿಸಿದವರ ನಿರ್ಲಕ್ಷ್ಯದ ಪಾತ್ರವಿದೆಯೇ ಎಂದು ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಸಚಿವ ಸತ್ಯಕುಮಾರ್ ಯಾದವ್ ಸಂತಾಪ ಸೂಚಿಸಿ ಗಾಯಾಳುಗಳಿಗೆ ನೆರವು ನೀಡಿದರು. ಜಿಲ್ಲಾಧಿಕಾರಿ ಶ್ಯಾಮ್ ಪ್ರಸಾದ್ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು ಮತ್ತು ಹಾನಿಗೊಳಗಾದ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.


