ಮಂಡ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಾಣಗೊಂಡಿರುವ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ, ಸಚಿವೆ ಶೋಭಾ ಕರಂದ್ಲಾಜೆ, ನಿರ್ಮಲಾನಂದ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಚೆಲುವರಾಯಸ್ವಾಮಿ, ಆರ್ ಅಶೋಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆದಿಚುಂಚನಗಿರಿ ಮಠಕ್ಕೆ ಬಂದ ಪ್ರಧಾನಿ ಜ್ವಾಲಾಪೀಠದ ದರ್ಶನ ಬಳಿಕ ಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ‘ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದರು. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಆಧ್ಯಾತ್ಮ ಹಾಗೂ ತ್ರಿವಿಧ ದಾಸೋಹ ಮೂಲಕ ಬಾಲಗಂಗಾಧರ ನಾಥ ಸ್ವಾಮೀಜಿಯವರು ಜ್ಞಾನದ ಬೆಳಕಾಗಿ ನಮ್ಮಲ್ಲಿ ಶಾಶ್ವತವಾಗಿದ್ದಾರೆ. ಸಣ್ಣ ಮಠವನ್ನು ಜಾಗತಿಕ ಶ್ರದ್ಧಾ ಕೇಂದ್ರವಾಗಿ ಬೆಳೆಸಿದ 71 ನೇ ಪೀಠಾಧಿಪತಿಯಾಗಿದ್ದ ಬಾಲಗಂಗಾಧರ ನಾಥ ಸ್ವಾಮೀಜಿ ಹೆಸರಲ್ಲಿ ಈ ಮಂದಿರ ನಿರ್ಮಾಣವಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದವರು ಸ್ವಾಮೀಜಿಯವರು. ಈಗ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ನಿರ್ಮಲಾನಂಧನಾಥ ಸ್ವಾಮೀಜಿ ಮಾತನಾಡಿ, ಡಾ.ಬಾಲಗಂಗಾಧರ ನಾಥ ಸ್ವಾಮೀಜಿಯವರ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿಜಿಯವರಿಗೆ ಧನ್ಯವಾದ, ಇದರಿಂದ ಕೋಟ್ಯಾಂತರ ಭಕ್ತರ ಆಸೆ ನೆರವೇರಿದೆ ಎಂದು ಹೇಳಿದರು. ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.


