ಬೆಳಗಾವಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಎರಡು ಮಕ್ಕಳ ತಾಯಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಅಂಗೋಲ್ನ ಬಬಲೆ ಗಲ್ಲಿ ನಿವಾಸಿ ಆಯುರ್ವೇದ ಥೆರಾಪಿಸ್ಟ್ ಅವಿನಾಶ್ ಅಶೋಕ್ ಸುಪ್ಪಣ್ಣ (40) ಕೊಲೆಯಾದ ವ್ಯಕ್ತಿ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮನೆ ಬಳಿ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿರುವ ಕೈಲಾಶ್ ಬಾಲಕೃಷ್ಣ (43) ಮತ್ತು ಅವಿನಾಶ್ ಸುಪ್ಪಣ್ಣನ ಪತ್ನಿ ಲಕ್ಷ್ಮೀ (29) ಕೊಲೆ ಆರೋಪಿಗಳು. ಏಪ್ರಿಲ್ 5 ರಂದು ಸಂಜೆ ಅಂಗೋಲ್ನ ಆಯುರ್ವೇದಿಕ್ ಕ್ಲಿನಿಕ್ನಲ್ಲಿ ತನ್ನ ಮಗ ಅವಿನಾಶ್ ತಲೆಗೆ ಗಾಯವಾಗಿ ಮೃತಪಟ್ಟಿದ್ದಾಗಿ ಕಮಲ್ ಅಶೋಕ್ ಸುಪ್ಪಣ್ಣ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 6 ರಂದು ದೂರು ದಾಖಲಿಸಿದ್ದರು. ಕೊಲೆಯ ಅನುಮಾನ ವ್ಯಕ್ತಪಡಿಸಿದ್ದರು.
ಪೊಲೀಸರು ತನಿಕೆ ಆರಂಭಿಸಿದಾಗ ಮೊದಲಿನಿಂದಲೂ ಮೃತನ ಪತ್ನಿಯ ಹೇಳಿಕೆಗಳು ಅಸಮಂಜಸವಾಗಿತ್ತು. ಕೊಲೆಯಾದವರ ತಲೆಯ ಮೇಲೆ ನಾಲ್ಕು ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆಯಲ್ಲಿ ಹೃದಯಕ್ಕೆ ಗಾಯವಾಗಿರುವುದಾಗಿ ವೈದ್ಯರು ಹೇಳಿದ್ದರು. ಇದು ಅನುಮಾನವನ್ನು ಬಲಪಡಿಸಿದ್ದರಿಂದ ತನಿಖೆ ತೀವ್ರಗೊಳಿಸಲಾಗಿತ್ತು ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹೇಳಿದ್ದಾರೆ.
ಫೋರೆನ್ಸಿಕ್ ತಂಡವು ಘಟನಾ ಸ್ಥಳದಲ್ಲಿ ರಕ್ತದ ಕಲೆ ಮಾದರಿ ಮತ್ತು ಲುಮಿನೋಲ್ ವಿಶ್ಲೇಷಣೆಯನ್ನು ನಡೆಸಿದೆ. ಪತ್ನಿ ನೀಡಿದ ಹೇಳಿಕೆಗಳು ಸ್ಥಳದಲ್ಲಿ ದೊರೆತ ಸಾಕ್ಷ್ಯಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಕೈಲಾಶ್ ಬಾಲಕೃಷ್ಣ ಮತ್ತು ಲಕ್ಷ್ಮಿ ಅವರನ್ನು ತೀವ್ರ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ತಿಳಿಸಿದ್ದಾರೆ.
ಕೈಲಾಶ್ ಕ್ಲಿನಿಕ್ ಗೆ ಹೋಗಿ ಅವಿನಾಶ್ ಮೇಲೆ ಗ್ಯಾಸ್ ಸಿಲಿಂಡರ್ ನಿಂದ ಹಲ್ಲೆ ನಡೆಸಿದ್ದು, ಲಕ್ಷ್ಮಿ ಮನೆಯಲ್ಲಿಯೇ ಇದ್ದಳು. ಅವಿನಾಶ್ ತಲೆಗೆ ನಾಲ್ಕು ಗಾಯಗಳಾಗಿದ್ದು, ಎದೆಯ ಮೇಲೂ ಸಿಲಿಂಡರ್ ನಿಂದ ಹಲ್ಲೆ ನಡೆಸಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೊಲೆ ಮಾಡಿರುವಂತೆ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿಗೆ ಕಡಿಮೆ ಬ್ಲಡ್ ಶುಗರ್ ಮತ್ತು ಅಧಿಕ ರಕ್ತದೊತ್ತಡವಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದು, ಮೇಜಿನ ಮೇಲೆ ಬಿದ್ದಿರಬಹುದು ಎಂದು ಹೇಳಿದ್ದಳು. ಘಟನಾ ಸ್ಥಳ ಪರೀಕ್ಷಿಸಿದ ನಂತರ ಮರಣೋತ್ತರ ಪರೀಕ್ಷೆಯ ವರದಿ ಮತ್ತು ರಕ್ತದ ಕಲೆಗಳ ಮಾದರಿ ವಿಶ್ಲೇಷಣೆಯ ಬಳಿಕ ಕೊಲೆ ಎಂಬ ಅನುಮಾನ ಹೆಚ್ಚಾಯಿತು. ಫೋರೆನ್ಸಿಕ್ ತಂಡವು ಉತ್ತಮ ಕೆಲಸ ಮಾಡಿದ್ದು, ನಮ್ಮ ಅನುಮಾನವನ್ನು ದೃಢಪಡಿಸಿದವು ಎಂದು ಹೇಳಿದರು.


