ಶೇ. ೫೦ಕ್ಕಿಂತಲೂ ಹೆಚ್ಚಿನ ಮೀಸಲುಳ್ಳ ಎಲ್ಲ ಕಾನೂನುಗಳಿಂದು ನಿರರರ್ಥವಾಗಿರುವಾಗ ಕೇಂದ್ರ ಮತ್ತು ರಾಜ್ಯಗಳ ಹೊಣೆಗಾರಿಕೆ ಏನು ? ಈ ದಿಶೆಯಲ್ಲಿ ಒಳಮೀಸಲು ಹೆಚ್ಚಳ, ರಾಜ್ಯಗಳಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ರಾಜ್ಯಗಳ ಈ ತೀರ್ಮಾನಗಳಿಗೆ ಕೇಂದ್ರದ ಅಧಿಕಾರಯುತ ಸಹಮತವೂ ಮುಖ್ಯ.
ಒಳಮೀಸಲು ಗೋಜಲು .. ! ಯಾವುದೇ ರಾಜಕೀಯ ಪಕ್ಷವಿಂದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿ. ಇದೊಂದು ಬಿಡಿಸಲಾರದ ಕಗ್ಗಂಟು. ಸಂವಿಧಾನದಲ್ಲಿ ಅಡಕವಾದ ಸಾಮಾಜಿಕ ನ್ಯಾಯವನ್ನು ಶೋಷಿತರಿಗೆ ಹಂಚುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರ ಕಳೆದ ಅರವತ್ತು ವರ್ಷಗಳಿಂದಲೂ ಕೆಲವೊಂದು ಗಂಭೀರ ಕಾನೂನು ತೊಡಕುಗಳನ್ನು ಎದುರಿಸುವಂತಾಗಿರುವುದು ಗಮನಾರ್ಹ. ಮೀಸಲು ಮತ್ತು ಒಳಮೀಸಲು ವಿಚಾರದಲ್ಲಿ ಈ ರಾಜ್ಯದಲ್ಲಿ ತಲೆದೋರಿರುವಷ್ಟು ಸಮಸ್ಯೆಗಳು ದೇಶದ ಇತರೆ ರಾಜ್ಯಗಳಲ್ಲಿ ದಟ್ಟವಾಗಿ ಗೋಚರಿಸುವುದಿಲ್ಲ. ಒಟ್ಟಿನಲ್ಲಿ ಸರ್ಕಾರ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡರೂ ಇದು ಟೀಕೆ, ಅಪಸ್ವರ ಮತ್ತು ಆಕ್ಷೇಪಗಳಿಗೆ ಗುರಿಯಾಗುವುದು ಕಟು ವಾಸ್ತವ. ಏಕೆಂದರೆ ಸ್ವರಾಜ್ಯ ಪೂರ್ವದಿಂದಲೂ ಕರ್ನಾಟಕ ರಾಜ್ಯ ಪ್ರಗತಿಪೂರ್ಣ ರಾಜ್ಯಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಹದು.
ಮಿಗಿಲಾಗಿ ಸಮಾಜದ ಬಹುತೇಕ ದುರ್ಬಲ ಸಮುದಾಯಗಳಿಗೆ ಬಹುಕಾಲದಿಂದಲೂ ಸಮಾನತೆ ಮತ್ತು ನ್ಯಾಯವನ್ನು ನೀಡಬೇಕೆಂಬ ಆಶಯಗಳ ನೆಲೆಗಟ್ಟು ಹೊಂದಿರುವ ರಾಜ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನಿಗದಿಪಡಿಸಿ ಎಂಬುದು ಆಗ್ರಹ. ಈ ದಿಶೆಯಲ್ಲಿ ನ್ಯಾಯಮೂರ್ತಿ ಎ .ಜೆ. ಸದಾಶಿವ ಅವರು ಒಂದು ದಶಕದ ಹಿಂದೆ ಸರ್ಕಾರಕ್ಕೆ ನೀಡಿರುವ ವರದಿ ಮಹತ್ವದ್ದು.
ಪರಿಶಿಷ್ಟ ಸಮುದಾಯದಲ್ಲಿಯೇ ಎಡಗೈ ಮತ್ತು ಬಲಗೈ ಮೀಸಲು ವಿಚಾರದಲ್ಲಿ ಸರ್ಕಾರಗಳು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ದಲಿತ ಸಮುದಾಯದ ಮೀಸಲು, ಇತರೆ ವರ್ಗದವರಿಗೆ ಸರ್ಕಾರ ಈಗಾಗಲೇ ನೀಡಿರುವ ಮೀಸಲು ಪದ್ದತಿಯ ಮೇಲೆ ಪರೋಕ್ಷ ಪರಿಣಾಮವನ್ನು ಬೀರಿದೆ ಎಂಬುದು ನಿಸ್ಸಂದೇಹ. ಸಮಾಜದಲ್ಲಿ ನೊಂದವರಿಗೆ ಮತ್ತು ಶೋಷಿತರಿಗೆ ಮೀಸಲು ಹೆಚ್ಚಿಸಬೇಕೆಂಬ ಕಾನೂನು ತಜ್ಞರ ಶಿಫಾರಸುಗಳಿಗೆ ಬಲು ಮುಖ್ಯ ವಾಗಿ ಗಟ್ಟಿಹಲ್ಲು ಮೂಡಿಸಬೇಕಿರುವುದು ಕೇಂದ್ರ ಸರ್ಕಾರ. ರಾಜ್ಯಗಳಿಗೆ ಶಾಸನ ರಚನೆಯ ಅಧಿಕಾರ ಇದೆ. ಆದರೆ ದೇಶದ ಮೂಲ ಮೀಸಲು ಕಾಯಿದೆಗೆ ಭಂಗ ತರುವಂತಹ ಅಥವಾ ಅವುಗಳ ಉಲ್ಲಂಘನೆಯಾಗುವ ರಾಜ್ಯದ ಶಾಸನಗಳು ಕಾನೂನಿನ ದೃಷ್ಟಿಯಲ್ಲಿ ಊರ್ಜಿತವಾಗುವುದು ಬಲು ಕಷ್ಟ. ಎಲ್ಲಿಯವರೆಗೆ ರಾಜ್ಯಗಳು ಈ ವಿಚಾರದಲ್ಲಿ ನಿಖರ, ವಾಸ್ತವಿಕ ಮತ್ತು ಆಧಾgಪೂರ್ವಕ ಮಾಹಿತಿಯನ್ನು ಹೊಂದಿರುವುದಿಲ್ಲವೋ, ಅಲ್ಲಿಯವರೆಗೆ ಒಳಮೀಸಲು ಎಂಬುದು ದಲಿತರ ಪಾಲಿಗೆ ಕೈಗೆಟುಕದ ದ್ರಾಕ್ಷಿ !
ಶೇಕಡಾ ೫೦ಕ್ಕೂ ಹೆಚ್ಚಿನ ಮೀಸಲು ಮತ್ತು ಮೀಸಲು ನಿಗದಿಗೆ ಸುಪ್ರೀಂಕೋರ್ಟ್ ಒಪ್ಪುವುದಿಲ್ಲ. ಸರ್ವೋನ್ನತ ನ್ಯಾಯಾಲಯದ ಈ ತೀರ್ಪು ನೇಪಥ್ಯಕ್ಕೆ ಸರಿಯಬೇಕಾದರೆ ಸಂಸತ್ತಿನಲ್ಲಿ ಪ್ರಸಕ್ತ ಜಾರಿಯಲ್ಲಿರುವ ಮೀಸಲು ಶಾಸನಕ್ಕೆ ಸಮಗ್ರ ತಿದ್ದುಪಡಿಯಾಗಬೇಕು. ಪಕ್ಷಬೇಧ ಮರೆತು ಆಡಳಿತ ಮತ್ತು ವಿಪಕ್ಷಗಳು ಈ ವಿಚಾರದಲ್ಲಿ ಇದರ ಸಾಧಕ-ಬಾಧಕವನ್ನು ದೇಶದ ಸಂಸತ್ತಿನಲ್ಲಿ ಚರ್ಚಿಸಬೇಕು. ತರುವಾಯ ತರ್ಕ, ನ್ಯಾಯಬದ್ಧ ನಿರ್ಣಯವನ್ನೂ ಕೈಗೊಳ್ಳಬೇಕು. ಶೇ. ೫೦ಕ್ಕಿಂತಲೂ ಹೆಚ್ಚಿನ ಮೀಸಲುಳ್ಳ ಎಲ್ಲ ಕಾನೂನುಗಳಿಂದು ನಿರರರ್ಥವಾಗಿರುವಾಗ ಕೇಂದ್ರ ಮತ್ತು ರಾಜ್ಯಗಳ ಹೊಣೆಗಾರಿಕೆ ಏನು ? ಈ ದಿಶೆಯಲ್ಲಿ ಒಳಮೀಸಲು ಹೆಚ್ಚಳ, ರಾಜ್ಯಗಳಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ರಾಜ್ಯಗಳ ಈ ತೀರ್ಮಾನಗಳಿಗೆ ಕೇಂದ್ರದ ಅಧಿಕಾರಯುತ ಸಹಮತವೂ ಮುಖ್ಯ.


