Menu

ಬಲಗೊಳ್ಳಲಿ ಪರ್ಯಾಯ ನ್ಯಾಯದಾನ ಪ್ರಕ್ರಿಯೆ

ಲೋಕ್‌ಅದಾಲತ್ ಮತ್ತು ಮಧ್ಯಸ್ತಿಕೆ ಮೂಲಕ ನ್ಯಾಯದಾನದ ತ್ವರಿತ ಪ್ರಕ್ರಿಯೆ ವಿಚಾರದಲ್ಲಿ ಸರ್ಕಾರ ಮತ್ತು ಕಾನೂನು ಸೇವಾ ಪ್ರಾಧಿಕಾರ ಗುರುತರ ವಹಿಸಬೇಕಿದೆ. ಕಾನೂನು ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನ ಮೂಲಕ ಕೋರ್ಟುಗಳ ಮೇಲೆ ನೇರವಾಗಿ ಉಂಟಾಗುತ್ತಿರುವ ವ್ಯಾಜ್ಯಗಳ ಅಧಿಕ ಒತ್ತಡದ ನಿವಾರಣೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ .

ದೇಶದ ನಾನಾ ಭಾಗಗಳಲ್ಲಿರುವ ವಿವಿಧ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಮೇಲೆ ವ್ಯಾಜ್ಯಗಳ ಒತ್ತಡ ವಿಪರೀತವಾಗಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ, ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ಪ್ರಮಾಣವೂ ಅಧಿಕಗೊಂಡಿರುವುವುದು ಕಳವಳಕಾರಿ. ದಾಖಲಾಗುವ ಪ್ರಕರಣಗಳು ಅಧಿಕ. ಆದರೆ ಇವುಗಳನ್ನು ಬಗೆಹರಿಸಲು ಅಗತ್ಯವಿರುವ ಸೌಕರ್ಯ ಮತ್ತು ಸೌಲಭ್ಯ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು ಗಮನಾರ್ಹ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವನಿಗೆ ಕೈಗೆಟುಕುವ ಹಾದಿಯಲ್ಲಿ ನ್ಯಾಯ ದೊರೆಯಬೇಕು. ಇದರಲ್ಲಿ ಯಾವುದೇ ತಾರತಮ್ಯವಿರಬಾರದು ಮತ್ತು ನ್ಯಾಯದಾನ ಈ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವೂ ಸಲ್ಲದು. ಇವೆಲ್ಲವೂ ದೇಶದ ಕಾನೂನು ಮತ್ತು ಸಂವಿಧಾನ ಮತ್ತು ಸರ್ಕಾರಗಳ ಮಟ್ಟದಲ್ಲಿರುವ ಒಂದು ನೀತಿ. ಆದರೆ ಇವುಗಳ ಅನುಷ್ಠಾನ ಮತ್ತು ಜಾರಿ ವಿಷಯವನ್ನು ಗಮನಿಸಿದಾಗ ಭಾರತದಲ್ಲಿ ಇದ್ಯಾಕೆ ಹೀಗೆ ಎಂಬ ಪ್ರಶ್ನೆ ತಲೆದೋರುವುದು ಖಂಡಿತ.

ದೇಶದ ನ್ಯಾಯಾಲಯಗಳ ಮುಂದಿರುವ ಎಲ್ಲ ವ್ಯಾಜ್ಯಗಳಲ್ಲಿ ಹುರುಳಿದೆ ಎನ್ನಲಾಗದು. ಪ್ರತಿ ನಿತ್ಯ ಸಾವಿರಾರು ವ್ಯಾಜ್ಯಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗುತಿದ್ದು ಇವುಗಳಲ್ಲಿ ಬಹುತೇಕ ಅಪ್ರಸ್ತುತ, ಅನಗತ್ಯ ಮತ್ತು ಅಸಮಂಜಸ ಪ್ರಕರಣಗಳು ಹೌದು. ಗ್ರಾಮೀಣ ಮಟ್ಟದಲ್ಲಿ ಬಗೆಹರಿಯಬೇಕಿರುವ ಲಘು ವ್ಯಾಜ್ಯವೂ ಇಂದು ಸುಪ್ರೀಂಕೋರ್ಟ್‌ವರೆಗೆ ಸಲ್ಲಿಕೆಯಾಗುತ್ತಿರುವ ಪ್ರಮಾಣವನ್ನು ನೋಡಿದಾಗ ಕೆಲವೊಂದು ಗಂಭೀರ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವಂತಾಗುತ್ತೆ. ಕಕ್ಷಿದಾರರ ಮನೋಧೋರಣೆ ಮತ್ತು ವಕೀಲರ ಮೇಲಾಟ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಸ್ಥಾಪನೆಯಾಗದ ನ್ಯಾಯಾಲಯ, ಸಿಬ್ಬಂದಿ ನೇಮಕಾತಿಯಲ್ಲಿ ಸರ್ಕಾರ ಅನುಸರಿಸುವ ವಿಳಂಬ ನೀತಿ ಇತ್ಯಾದಿ ಸಂಗತಿಗಳೆಲ್ಲವೂ ಕೋರ್ಟ್ ಮೇಲೆ ಒತ್ತಡ ಹೆಚ್ಚಲು ಕಾರಣವಾಗಿದೆ. ಇದರ ಪರಿಹಾರಕ್ಕೆ ಇಂದು ಕಾನೂನು ಸೇವಾ ಪ್ರಾಧಿಕಾರ, ಸರ್ಕಾರ ಮತ್ತು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸಕ್ರಿಯವಾಗಿ ಮುಂದಾಗಬೇಕಿದೆ. ಲೋಕ್ ಅದಾಲತ್ ಮತ್ತು ಮಧ್ಯಸ್ತಿಕೆ ಮೂಲಕ ಸಿವಿಲ್ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ ಬಗ್ಗೆ ಇಂದು ಸಮಾಜದಲ್ಲಿ ಅರಿವು ತಿಳಿವಳಿಕೆ ಮೂಡಬೇಕಿದೆ.

ಕೋರ್ಟ್ ಮೆಟ್ಟಿಲೇರುವ ಮುನ್ನ, ಪ್ರಕರಣದ ಮಹತ್ವವನ್ನು ಅರಿತು ಲಘು ವ್ಯಾಜ್ಯಗಳು ಮಧ್ಯಸ್ತಿಕೆ ಅಥವಾ ಅದಾಲತ್ ಮಟ್ಟದಲ್ಲಿ ವಿಲೇವಾರಿಯಾಗುವ ಪರ್ಯಾಯ ನ್ಯಾಯ ನಿರ್ಣಯ ಪದ್ದತಿ ನಮ್ಮ ದೇಶದಲ್ಲಿ ಇನ್ನೂ ಜನಜನಿತವಾಗದಿರುವುದು ದುರದೃಷ್ಟಕರ. ೧೯೬೦ರಲ್ಲಿ ಈ ದಿಶೆಯಲ್ಲಿ ಕಾನೂನೊಂದು ಜಾರಿಯಾಗಿದ್ದರೂ, ಇದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟವರು ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಈ ದಿಶೆಯಲ್ಲಿ ಸರ್ಕಾರಗಳಿಗೆ ಮಾಡಿರುವ ಸಲಹೆ ಗಮನಾರ್ಹ. ಸಣ್ಣ ಪುಟ್ಟ ವ್ಯಾಜ್ಯಗಳು ಕೆಳಹಂತದಲ್ಲಿಯೇ ಸಮಪರ್ಕಕ ರೀತಿಯಲ್ಲಿ ವಿಲೇವಾರಿಯಾಗಲು ರಾಜ್ಯಮಟ್ಟದಲ್ಲಿ ವ್ಯಾಜ್ಯ ವಿಲೇವಾರಿ ನಿರ್ದೇಶನಾಲಯದ ಅಗತ್ಯವಿದೆ ಎಂದಿದ್ದಾರೆ.
ಲೋಕ್‌ಅದಾಲತ್ ಮತ್ತು ಮಧ್ಯಸ್ತಿಕೆ ಮೂಲಕ ನ್ಯಾಯದಾನದ ತ್ವರಿತ ಪ್ರಕ್ರಿಯೆ ವಿಚಾರದಲ್ಲಿ ಸರ್ಕಾರ ಮತ್ತು ಕಾನೂನು ಸೇವಾ ಪ್ರಾಧಿಕಾರದ ಪಾತ್ರ ಅತಿ ಮುಖ್ಯ. ಕಾನೂನು ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನ ಮೂಲಕ ಕೋರ್ಟುಗಳ ಮೇಲೆ ನೇರವಾಗಿ ಉಂಟಾಗುತ್ತಿರುವ ವ್ಯಾಜ್ಯ ಒತ್ತಡ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕಿದೆ .

Related Posts

Leave a Reply

Your email address will not be published. Required fields are marked *