Menu

ಪರಿಮಿತ ಅಣ್ವಸ್ತ್ರ: ಅಗ್ರ ದೇಶಗಳು ಸಮನ್ವಯ ಸಾಧಿಸುವುದೇ?

ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹಕ್ಕೆ ಶಾಶ್ವತವಾಗಿ ಲಗಾಮು ವಿಧಿಸಿ ಗೊತ್ತುವಳಿ ಅಂಗೀಕರಿಸುವ ಅಧಿಕಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗಿದೆ. ಆದರೆ ಇಂತಹ ಗೊತ್ತುವಳಿ ಅಂಗೀಕಾರಕ್ಕೆ ಇಂದು ಅಗ್ರ ದೇಶಗಳು ಹೊಂದಿರುವ ವೀಟೋ ಅಧಿಕಾರವೇ ಬಹುದೊಡ್ಡ ತೊಡಕು. ಎಲ್ಲಿಯವರೆಗೂ ಅಗ್ರದೇಶಗಳು ಈ ವಿಚಾರದಲ್ಲಿ ಏಕೀಭವಿಸುವುದಿಲ್ಲವೋ ಅಲ್ಲಿಯವರೆಗೂ ಪರಮಾಣು ಅಸ್ತ್ರಗಳ ಸಂಗ್ರಹದ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ತಳಮಳ ಮತ್ತು ಆತಂಕ ನಿಲ್ಲುವುದಿಲ್ಲ.

ಇರಾನ್ ಮೇಲೆ ಐದು ದಿನಗಳ ಕಾಲ ದಾಳಿ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಂಬಂಧ ಅಮೆರಿಕ-ಇರಾನ್ ನಡುವೆ ಮಾತುಕತೆ ಆಗಿದೆ ಎಂದೂ ಅವರು ಹೇಳಿರುವುದು ಗಮನಾರ್ಹ. ಆದರೆ ಇಂತಹ ಮಾತುಕತೆಯೇ ಆಗಿಲ್ಲ. ಇದು ಟ್ರಂಪ್ ಈಗ ಆಡಿದ ಮೈಂಡ್‌ಗೇಮ್ ಎಂದು ಇರಾನ್ ತಿರುಗೇಟು ನೀಡಿದೆ. ಅದೇನೆ ಇರಲಿ. ದೊಡ್ಡಣ್ಣನೀಗ ತುಸು ವಾಸ್ತವ ಪ್ರಪಂಚಕ್ಕೆ ಬಂದಂತಿದೆ.

ಯುದ್ಧ ಶುರುವಾಗಿ ಮೂರು ವಾರ ಆಗಿದೆ. ಇದುವರೆಗೆ ಎರಡೂ ಕಡೆ ಸಂಭವಿಸಿರುವ ನಷ್ಟ ಅಪಾರ. ಈ ಸಮರದಲ್ಲಿ ಮೇಲುಗೈಸಾಧಿಸಿದ್ದು ಯಾರು ? ಗೆದ್ದವರು ಯಾರು, ಬಿದ್ದವರು ಯಾರೆಂಬುದು ಪ್ರಸ್ತುತವಲ್ಲ. ಆದರೆ ಯಾರಿಗೂ ಬೇಡವಾಗಿದ್ದ ಈ ಸಮರಕ್ಕೆ ಕೆಲವೊಂದು ಪ್ರಬಲವಾದ ಕಾರಣಗಳಿವೆ. ಇದು ಚರ್ಚೆಯಾಗಬೇಕಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ.

ಹೌದು. ಇಂದು ಜಗತ್ತನ್ನು ನಡುಗಿಸುವಂತಹ ನ್ಯೂಕ್ಲಿಯಾರ್ ಅಸ್ತ್ರಗಳ ಸಂಗ್ರಹ ಎಂಬುದು ಗಂಭೀರ ವಿಷಯ. ಆದರೆ ಇದರ ಸಂಗ್ರಹದ ವಿಚಾರದಲ್ಲಿ ಇದುವರೆಗೆ ಯಾವ ದೇಶವೂ ಪ್ರಾಮಾಣಿಕವಾಗಿಲ್ಲ ಎಂಬುದು ಕಟುಸತ್ಯ. ಹಾಗಾದರೆ ನ್ಯೂಕ್ಲಿಯಾರ್ ಅಸ್ತ್ರಗಳ ಅಪರಿಮಿತ ಸಂಗ್ರಹಕ್ಕೆ ಜಾಗತಿಕ ಮಟ್ಟದಲ್ಲಿ ಕಡಿವಾಣ ಹಾಕುವುದು ಅ ಹೇಗೆ ? ಈ ಪ್ರಶ್ನೆಗಿಂದು ಉತ್ತರಿಸಬೇಕಿರುವುದು ಬೇರೆ ಯಾರೂ ಅಲ್ಲ. ಅಮೆರಿಕ, ರಷ್ಯಾ ಚೀನಾ, ಬ್ರಿಟನ್ ಮತ್ತು ಫ್ರಾನ್ಸ್. ಇರಾನ್, ಕೊರಿಯಾ ದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ನ್ಯೂಕ್ಲಿಯಾರ್ ಅಸ್ತ್ರಗಳಿವೆ . ಇದು ಅಮೆರಿಕ ಸೇರಿದಂತೆ ಎಲ್ಲ ದೇಶಗಳಿಗೂ ಅಪಾಯ ಎಂಬುದು ಅಮೆರಿಕದ ಕಳವಳ ಸರಿಯಷ್ಟೆ. ಆದರೆ ದುರಂತ ಎಂದರೆ ಭದ್ರತಾ ಮಂಡಳಿಯಲ್ಲಿ ವೀಟೋ ಪವರ್ ಹೊಂದಿರುವ ಅಗ್ರದೇಶಗಳು ಕೇವಲ ಇತರರಿಗೆ ಒಂದು ಕಡೆ ಉಪದೇಶ ಮಾಡುತ್ತ, ಮತ್ತೊಂದು ಕಡೆ ರಹಸ್ಯಮಯವಾಗಿ ಮಾರಕ ಅಣ್ವಸ್ತ್ರ ಸಂಗ್ರಹದಲ್ಲಿ ತೊಡಗಿರುವುದು ಅಪ್ರಾಮಾಣಿಕ ವಿನಾಶಕಾರಿ ನಡೆ ಎನ್ನದೆ ವಿಧಿಯಿಲ್ಲ.

ಎಂಭತ್ತು ವರ್ಷಗಳ ಹಿಂದೆ ರೂಪಿತಗೊಂಡ ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಆರ್ಟಿಕಲ್ ೫೧ ರ ಪ್ರಕಾರ, ನ್ಯೂಕ್ಲಿಯಾರ್ ಅಸ್ತ್ರಗಳ ಸಂಗ್ರಹಕ್ಕೆ ಶಾಶ್ವತವಾಗಿ ಲಗಾಮು ಹಾಕುವ ಗೊತ್ತವಳಿ ಅಂಗೀಕರಿಸುವ ಅಧಿಕಾರ ಭದ್ರತಾ ಮಂಡಳಿಗೆ ಇದೆ . ಆದರೆ ಇಂತಹ ಗೊತ್ತುವಳಿ ಅಂಗೀಕಾರಕ್ಕೆ ಇಂದು ಅಗ್ರ ದೇಶಗಳು ಹೊಂದಿರುವ ವೀಟೋ ಅಧಿಕಾರವೇ ದೊಡ್ಡ ಅಡ್ಡಿ. ಎಲ್ಲಿಯವರೆಗೂ ಅಗ್ರದೇಶಗಳು ಈ ವಿಚಾರದಲ್ಲಿ ಏಕೀಭವಿಸುವುದಿಲ್ಲವೋ ಅಲ್ಲಿಯವರೆಗೂ ಪರಮಾಣು ಅಸ್ತ್ರಗಳ ಸಂಗ್ರಹದ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಪಾರದರ್ಶಕತೆ ಉಂಟಾಗದು. ಜಗತ್ತಿನ ವಿನಾಶ ಬಯಸುವ ಅಸ್ತ್ರಗಳ ತಯಾರಿಕೆಯಲ್ಲಿ ಪರಿಮಿತಿ ಮತ್ತು ಕಟ್ಟುನಿಟ್ಟಿನ ಕಾನೂನುಗಳನ್ನು ರಚಿಸುವ ಅತಿದೊಡ್ಡ ಹೊಣೆಗಾರಿಕೆ ವಿಶ್ವಸಂಸ್ಥೆಯದ್ದು. ಎರಡು ಮಹಾ ಯುದ್ಧಗಳ ಬಳಿಕವೂ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಶಾಂತಿ ಮತ್ತು ಭದ್ರತೆಗೆ ಅಗತ್ಯವಿರುವ ವಾಸ್ತವಿಕ ಮಾತುಕತೆಗೆ ಒತ್ತು ದೊರೆಯದಿರುವುದು ನಿಜಕ್ಕೂ ಕಳವಳಕಾರಿ.

Related Posts

Leave a Reply

Your email address will not be published. Required fields are marked *