ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ ಗೃಹ ಬಳಕೆದಾರರಿಗೆ ಹೊಸ ನಿಯಮ ಜಾರಿಗೊಳಿಸಿದ್ದು, ನಗರ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 40 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಾಗಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ವಾಣಿಜ್ಯ ಬಳಕೆದಾರರು ತಮ್ಮ ಸಾಮಾನ್ಯ ಬಳಕೆಯ ಕೇವಲ ಶೇ.20 ಗ್ಯಾಸ್‌ನಲ್ಲೇ ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಈಗ ಪ್ರತಿದಿನ 16,000 ವಾಣಿಜ್ಯ ಸಿಲಿಂಡರ್‌ಗಳನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಹಿಂದೆ ದಿನಕ್ಕೆ ಸುಮಾರು 45,000 ಸಿಲಿಂಡರ್ ಬಳಕೆಯಾಗುತ್ತಿತ್ತು. ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಹೊಸ ನಿಯಮದಡಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕ್ಯಾಂಟೀನ್‌ಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ 4,200 ಸಿಲಿಂಡರ್, ಸರ್ಕಾರಿ ವ್ಯವಸ್ಥೆಗೆ 1,200 ಸಿಲಿಂಡರ್ ನೀಡಲಾಗುತ್ತಿದೆ. ಹೋಟೆಲ್‌ಗಳಿಗೆ 10,000 ಸಿಲಿಂಡರ್ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಹಿಂದೆ ವಾರಕ್ಕೆ ಐದು ಸಿಲಿಂಡರ್ ಬಳಸುತ್ತಿದ್ದ ಹೋಟೆಲ್‌ಗಳು ಈಗ ಒಂದು ಸಿಲಿಂಡರ್‌ನಲ್ಲೇ ಕೆಲಸ ನಡೆಸಿಕೊಳ್ಳಬೇಕು. ಇದು ಅನಿವಾರ್ಯ ಎಂದು ಸಚಿವರು ತಿಳಿಸಿದರು. ಕೃಷಿ ಚಟುವಟಿಕೆಗಳು, ಬೀಜ ಸಂಸ್ಕರಣೆ ಮತ್ತು ಔಷಧ ತಯಾರಿಕೆಗಾಗಿ ದಿನಕ್ಕೆ 500 ಸಿಲಿಂಡರ್ ಮೀಸಲಿಡಲಾಗಿದೆ. ತುರ್ತು ಪರಿಸ್ಥಿತಿಗಳಿಗೆ 205 ಸಿಲಿಂಡರ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹೆಚ್ಚುವರಿ ಶೇ.20 ಸಿಲಿಂಡರ್‌ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡುವುದು ಹಾಗೂ ಅಧಿಕೃತವಲ್ಲದ ಮಾರುಕಟ್ಟೆಗೆ ಹೋಗುವುದನ್ನು ತಡೆಯಲು ನಿರ್ಣಯ ಕೈಗೊಂಡಿದೆ. ಎಲ್ಲಾ ವಾಣಿಜ್ಯ ಬಳಕೆದಾರರು, ಮುಖ್ಯವಾಗಿ ಹೋಟೆಲ್‌ಗಳು ಒಂದು ವಾರದೊಳಗೆ ಗೇಲ್ ಕಂಪನಿಯೊಂದಿಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಇಲ್ಲದಿದ್ದರೆ ಸಿಲಿಂಡರ್ ವಿತರಣೆ ಕಷ್ಟವಾಗಲಿದೆ ಎಂದು ಸೂಚನೆ ನೀಡಿದ್ದಾರೆ.
ಐವಾನ್ ಡಿ’ಸೋಜಾ ಮಾತನಾಡಿ, ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಕಾರ್ಯಾಚರಣೆ ಕಡಿಮೆ ಮಾಡಿದ್ದು, ನಷ್ಟದ ಭೀತಿ ಎದುರಿಸುತ್ತಿವೆ. ಸರ್ಕಾರಕ್ಕೆ ಗ್ಯಾಸ್ ಒದಗಿಸಲು ಸಾಧ್ಯವಾಗದಿದ್ದರೆ ಕನಿಷ್ಟ ಸೌದೆಗಳನ್ನಾದರೂ ಒದಗಿಸಭೇಕು, ಮಾರುಕಟ್ಟೆಯಲ್ಲಿ ಸೌದೆಗಳು ಸುಲಭವಾಗಿ ಲಭ್ಯವಿಲ್ಲ ಎಂದರು.


