Menu

ಉಪಚುನಾವಣೆ: ಹೈಕಮಾಂಡ್ ತೀರ್ಮಾನದಂತೆ ಬಿ ಫಾರಂ ವಿತರಣೆ ಅಂದ್ರು ಡಿಸಿಎಂ

ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು ಹಾಗೂ ಪಕ್ಷದ ಹಿತದೃಷ್ಟಿಯಿಂದ ನಾನು ಹಾಗೂ ಮುಖ್ಯಮಂತ್ರಿಯವರು ನಮ್ಮ ಅಭಿಪ್ರಾಯ ಮಂಡಿಸುತ್ತೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಆ ಪ್ರಕಾರ ಬಿ ಫಾರಂ ವಿತರಣೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಲ್ಲಿ ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಹಂತಗಳಿಂದಲೂ ವರದಿ ತರಿಸಿಕೊಂಡಿದ್ದೇನೆ. ನಮ್ಮ ನಾಯಕರುಗಳ ತಂಡವು ಭೇಟಿ ನೀಡಿ ಅವರ ಅಭಿಪ್ರಾಯಗಳನ್ನು ನನಗೆ ಕೊಟ್ಟಿದ್ದಾರೆ. ನಾನು ಕೆಲವರ ಬಳಿ ಮಾತನಾಡಿದ್ದೇನೆ‌. ಎರಡು ಮೂರು ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿಗಳು ಬರಲಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಯವರು ಎರಡು ಕ್ಷೇತ್ರದಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸಿದ್ದೇವೆ. ನಾನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಆ ಪ್ರಕಾರ ಬಿ ಫಾರಂ ವಿತರಣೆ ಮಾಡಲಾಗುವುದು ಎಂದರು.

ಈಗಾಗಲೇ ಬಿಜೆಪಿ ಎರಡು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂದು ಕೇಳಿದಾಗ, “ಇಲ್ಲಿ ಕುಟುಂಬ ಮುಖ್ಯವಾಗುವುದಿಲ್ಲ‌. ಪಕ್ಷ ಗೆಲ್ಲಬೇಕು.  ಪಕ್ಷ ಏನು ಹೇಳುತ್ತದೆಯೋ ಆ ರೀತಿ ನಡೆಯಬೇಕು. ಏಕೆಂದರೆ ಎರಡೂ ಕ್ಷೇತ್ರಗಳು ಪ್ರಮುಖ ಮುಖಂಡರ ಸ್ಥಾನಗಳು. ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದವರು. ಜೊತೆಗೆ ಅಲ್ಲಿ ಅಲ್ಪಸಂಖ್ಯಾತರೂ ಮುಖ್ಯ. ಹಿಂದಿನಿಂದಲೂ ಬೆಂಬಲ ನೀಡುತ್ತ ಬಂದಿದ್ದಾರೆ. ಎಲ್ಲರ ಜೊತೆ ಕುಳಿತು ಮಾತನಾಡಿ ಬಗೆಹರಿಸಬೇಕು. ಕಳೆದ ಚುನಾವಣೆಯಲ್ಲಿ ಟಿಕೆಟ್ ದೊರೆಯದೇ ಇದ್ದ ನಾಯಕರಿಗೆ ಸ್ಥಾನಮಾನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಯಾರಿಗೆ ಟಿಕೆಟ್ ನೀಡಬೇಕು, ಗೆಲುವು ಯಾರದ್ದು ಎನ್ನುವ ಸ್ಪಷ್ಟತೆಯಿದೆಯೇ ಎಂದು ಕೇಳಿದಾಗ, “ಇಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ, ಸಮೀಕ್ಷಾ ವರದಿಗಿಂತ ಪಕ್ಷ, ಕಾರ್ಯಕರ್ತರು ಏನು ಹೇಳುತ್ತಾರೆ ಎಂಬುದು ಮುಖ್ಯ” ಎಂದು ಉತ್ತರಿಸಿದರು.
ಅಸ್ಸಾಂ ಚುನಾವಣೆಗೆ ‘ಕರ್ನಾಟಕವನ್ನು ಕ್ಯಾಶ್ ಕೌ’ ಮಾಡಿಕೊಳ್ಳಲಾಗಿದೆ ಎನ್ನುವ ದಿ.ಅನಂತಕುಮಾರ್ ಅವರ ಪುತ್ರಿ ಐಶ್ವರ್ಯ ಮಾಡಿರುವ ಟೀಕೆಯ ಬಗ್ಗೆ ಕೇಳಿದಾಗ, “ಅವರು ಯಾರು ಎಂದು ನನಗೆ ಗೊತ್ತಿಲ್ಲ.‌ ನಮ್ಮ ಮನೆಯಲ್ಲೂ ಹಸುಗಳಿವೆ, ಅವುಗಳನ್ನು ನೋಡಿದ್ದಾರಾ ಅವರು. ಕೊಡುಗೆ ಕೊಟ್ಟ ಹಸುಗಳನ್ನು ಊರಿನಲ್ಲಿ ಕಟ್ಟಿದ್ದೇವೆ” ಎಂದರು. ಅಸ್ಸಾಂ ಚುನಾವಣೆ ಕುರಿತಂತೆ ನಾಯಕರ ಜೊತೆ ಚರ್ಚೆ ನಡೆಸಲಾಯಿತು. ಸಭೆ ನಡೆಸಿ ಪ್ರಚಾರ ವೇಳಾಪಟ್ಟಿಯನ್ನುಕೂಡ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಸಚಿವ ಸಂಪುಟ ಪುನರ್ ರಚನೆ ಹಾಗು ಹೊಸಬರನ್ನು ಪರಿಗಣಿಸಿ ಎನ್ನುವ ಆಗ್ರಹದ ಬಗ್ಗೆ ಕೇಳಿದಾಗ, “ಮಂತ್ರಿಯಾಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪೇನಿದೆ. ಮುಖ್ಯಮಂತ್ರಿಯವರು ಸಂಪುಟ ಪುನರ್ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರಲ್ಲವೇ‌. ಅವರು ಹೇಳಿದ ಮೇಲೆ ಖಾಲಿಯಿದೆ ಎಂದು ತಿಳಿದು ಪ್ರಯತ್ನ ಪಡುತ್ತಿದ್ದಾರೆ” ಎಂದರು.

ಸಂಪುಟ ಪುನರ್ ರಚನೆಯೇ ಅಥವಾ ಅಧಿಕಾರ ಹಂಚಿಕೆಯೇ ಎಂದಾಗ, “ಕಾಲ ನಿರ್ಣಯ ಮಾಡುತ್ತದೆ” ಎಂದು ಪ್ರತಿಕ್ರಿಯೆ ನೀಡಿದರು. ಪ್ರಿಯಾಂಕಾ ಗಾಂಧಿ ಅವರೊಟ್ಟಿಗೆ ಪ್ರತ್ಯೇಕ ಸಭೆ ನಡೆಸಲಾಯಿತು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, “ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಯಾರ ಬಳಿ ಏನು ಚರ್ಚೆ ಮಾಡಿದ್ದೇನೆ ಎನ್ನುವ ಬಗ್ಗೆ ಹೇಳಲು ಹೋಗುವುದಿಲ್ಲ. ಕಾಲ ನಿರ್ಣಯ ಮಾಡುತ್ತದೆ” ಎಂದು ಉತ್ತರಿಸಿದರು.

ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಹೌದು ಹುದ್ದೆ ಖಾಲಿಯಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಪಕ್ಷ ಹಾಗೂ ಶಾಸಕರು ತೀರ್ಮಾನ ಮಾಡಲಿದ್ದಾರೆ ಎಂದೂ ಹೇಳಿದ್ದಾರೆ” ಎಂದರು.

Related Posts

Leave a Reply

Your email address will not be published. Required fields are marked *