Menu

ಬೆಂಗಳೂರಲ್ಲಿ ಬೆಳ್ಳಿ ಕಳವು, ರಾಜಸ್ಥಾನದಲ್ಲಿ ಮಾರಾಟ, ಉಜ್ಜೈನಿಯಲ್ಲಿ ಪೂಜೆ ಬಳಿಕ ಪೊಲೀಸ್‌ ಅತಿಥಿಗಳಾದ ಜೂಜು ವ್ಯಸನಿಗಳು

ಆನ್‌ಲೈನ್ ಜೂಜು ವ್ಯಸನಿಗಳಾಗಿದ್ದ ಯುವಕರಿಬ್ಬರು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಆಭರಣ ಪಾಲಿಷ್ ಅಂಗಡಿಯಲ್ಲಿ ಕಳ್ಳತನ ನಡೆಸಿ ಈಗ ಪೊಲೀಸ್‌ ಅತಿಥಿಗಳಾಗಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 35 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ನರೇಂದ್ರ ಮತ್ತು ಕುಲ್ದೀಪ್ ಎಂದು ಗುರುತಿಸಲಾಗಿದೆ. ನರೇಂದ್ರ ಒಂದು ತಿಂಗಳಿನಿಂದ ಧನಲಕ್ಷ್ಮೀ ರೋಡಿಯಂ ಎಂಬ ಆಭರಣ ಪಾಲಿಷ್ ಅಂಗಡಿಯಲ್ಲಿ ಬೆಳ್ಳಿ ಆಭರಣ ಪಾಲಿಶ್‌ ಕೆಲಸ ಮಾಡುತ್ತಿದ್ದ.  ಆನ್‌ಲೈನ್ ಜೂಜಿನಿಂದ ನರೇಂದ್ರ ನಷ್ಟ ಅನುಭವಿಸಿದ್ದ. ಒಂದು ಬಾರಿ ದೊಡ್ಡ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿ ಕೆಲಸ ಮಾಡುತ್ತಿದ್ದ ಅಂಗಡಿಯಿಂದ10.12 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾನೆ. ಇವುಗಳ ಮೌಲ್ಯ 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಳವು ಬಳಿಕ ಆರೋಪಿ ನರೇಂದ್ರ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗಿ ಸ್ನೇಹಿತ ಕುಲ್ದೀಪ್ ಜೊತೆ ಸೇರಿ 3 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಬಂದ ಹಣದಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಹಾಗೂ ಪ್ರಯಾಗ್ ರಾಜ್‌ಗೆ ತೆರಳಿ ಪೂಜೆ ಸಲ್ಲಿಸಿದ್ದಾನೆ. ಉಳಿದ ಆಭರಣಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲಸೂರು ಗೇಟ್ ಪೊಲೀಸರು ಈ ಕಾರ್ಯಾಚರಣೆ ನಡೆಸಿ 35 ಲಕ್ಷ ರೂ. ಮೌಲ್ಯದ 10.12 ಕೆಜಿ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *