“2025-26ನೇ ಸಾಲಿನಲ್ಲಿ ಬಮೂಲ್ 3400 ಕೋಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಏಪ್ರಿಲ್ 1, 2025ರಿಂದ ಮಾರ್ಚ್ 31, 2026ರ ಅವಧಿಯಲ್ಲಿ ಸಂಸ್ಥೆಗೆ ಹಾಲು ನೀಡಿರುವ 1,27,644 ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 1 ರೂ. ಹೆಚ್ಚುವರಿ ಹಣ ನೀಡಲು ತೀರ್ಮಾನಿಸಲಾಗಿದೆ” ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದರು.
ಬೆಂಗಳೂರು ಡೈರಿ ವೃತ್ತದಲ್ಲಿರುವ ಬಮೂಲ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ಒಕ್ಕೂಟದಿಂದ 2900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲಿ 880 ಖಾಯಂ ಸಿಬ್ಬಂದಿ, 1800 ಗುತ್ತಿಗೆ ಕಾರ್ಮಿಕರು ಇದ್ದಾರೆ. ತಿಂಗಳಿಗೆ 15-16 ಕೋಟಿ ರೂ. ಸಿಬ್ಬಂದಿ ವೆಚ್ಚಕ್ಕೆ ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತಾತ್ಮಕವಾಗಿ, ಮಾರುಕಟ್ಟೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ಮಾಡುವ ಜವಾಬ್ದಾರಿ ಆಡಳಿತ ಮಂಡಳಿಗೆ ಇದೆ. ನಾನು ಬಮೂಲ್ ಅಧ್ಯಕ್ಷನಾದ ಬಳಿಕ ಬದಲಾವಣೆ ಮಾಡುವ ನಿರೀಕ್ಷೆ ರೈತರು, ಕಾರ್ಮಿಕರಲ್ಲಿದೆ. ನಾನು ಏನು ಮಾಡಿದ್ದೇನೋ ಗೊತ್ತಿಲ್ಲ, ಆದರೆ ನನ್ನ ಮೇಲೆ ನಿರೀಕ್ಷೆಯಂತೂ ಇದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವಾಗ ನಿರ್ದೇಶಕರು, ಸಿಬ್ಬಂದಿ ಸಹಕಾರ ಬೇಕಾಗುತ್ತದೆ. ಇವರ ಸಹಕಾರದಿಂದ ಒಂದು ಹಂತಕ್ಕೆ ಬಂದಿದ್ದು, ಈ ವರ್ಷ 500 ಕೋಟಿ ರೂ.ನಷ್ಟು ವಹಿವಾಟು ಹೆಚ್ಚಾಗಿದೆ” ಎಂದು ಮಾಹಿತಿ ನೀಡಿದರು.
1800 ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಬೋನಸ್
“ಹಿಂದಿನ ಆಡಳಿತ ಮಂಡಳಿಯಲ್ಲಿ 280 ಜನರನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದರು. 3 ವರ್ಷವಾಗಿದ್ದರೂ ನಮಗೆ ಖಾಯಂ ಮಾಡಿಲ್ಲ ಎಂದು ಅವರಿಂದ ಒತ್ತಡವಿದೆ. ಇದನ್ನು ಮಾಡಿದರೆ ವಾರ್ಷಿಕವಾಗಿ 1.60 ಕೋಟಿ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಸರ್ಕಾರದ ನಿಯಮ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ವೇತನ ಪ್ರಮಾಣ 2% ಇರಬೇಕು. ಆದರೆ ನಮ್ಮ ಒಕ್ಕೂಟದಲ್ಲಿ ಅದು 6.5% ಇದೆ. ನಾವು ನಮ್ಮದೇ ಆದ ಗುರಿ ಹೊಂದಿದ್ದೇವೆ. ನಮ್ಮ ವಹಿವಾಟಿನ ಮುಂದಿನ ಗುರಿ 3,400 ಕೋಟಿಯಿಂದ 4500 ಅಥವಾ 5000 ಕೋಟಿಗೆ ಹೋಗಬೇಕು. ಆಗ ಆಡಳಿತ ವೆಚ್ಚ ಸುಧಾರಿಸಬಹುದು. ನಮ್ಮ ಸಂಸ್ಥೆ ಲಾಭ ಕಂಡಿರುವ ಹಿನ್ನೆಲೆಯಲ್ಲಿ, ನಾವು ಕಾರ್ಮಿಕರಿಗೆ ಬಾಕಿ ಇದ್ದ 4.68 ಕೋಟಿ ಡಿಎ ಅನ್ನು ನೀಡಲು ತೀರ್ಮಾನಿಸಿದ್ದೇವೆ. 3 ವರ್ಷದಿಂದ ಖಾಯಂ ಆಗದ ಸಿಬ್ಬಂದಿಗಳನ್ನು ಖಾಯಂ ಮಾಡಿದ್ದೇವೆ. ನಮಗೆ ಶಕ್ತಿ ನೀಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ಬೋನಸ್ ನೀಡಲು ತೀರ್ಮಾನಿಸಿದ್ದೇವೆ. 2300 ಪ್ರಾಥಮಿಕ ಹಾಲು ಒಕ್ಕೂಟಗಳಿಗೆ ನಿರ್ವಹಣೆಗೆ ಪ್ರತಿ ಲೀಟರ್ ಗೆ 1.40 ರೂ. ನೀಡುತ್ತಿದ್ದು, ಈ ಬಾರಿ ನಮ್ಮ ನಿರ್ದೇಶದ ಮನವಿ ಮೇರೆಗೆ ಪ್ರತಿ ಸಂಘಗಳಿಗೆ 15 ಸಾವಿರದಂತೆ 3.45 ಕೋಟಿ ರೂ.ಗಳನ್ನು ನೀಡಲಾಗುವುದು. ನಮ್ಮಲ್ಲಿ 1,27,644 ಹಾಲು ಉತ್ಪಾದಕರಿದ್ದು, ಅವರು ಈ ವರ್ಷ 59,39,78,492 ಲೀಟರ್ ಹಾಲು ನೀಡಿದ್ದಾರೆ”ಎಂದು ತಿಳಿಸಿದರು.
“ಬೆಂಗಳೂರು ಹಾಲು ಒಕ್ಕೂಟದಲ್ಲಿ 24 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ನಮ್ಮ ಮುಂದೆ ಮಾರುಕಟ್ಟೆ ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ. ಆದರೂ ಬೇರೆ ಹಾಲುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಹಾಲು ಎಂದರೆ ಅದು ನಂದಿನಿ ಮಾತ್ರ. ನಾವು ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ಈ ಬೆಲೆ ಏರಿಕೆ ಹಣವನ್ನು ಗ್ರಾಹಕರಿಂದ ಪಡೆದು ರೈತರಿಗೆ ನೀಡುತ್ತಿದ್ದೇವೆ. ನಾವು 16-18 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದರೂ ಹಾಲು ಮಾರಾಟ ಮಾಡುತ್ತಿರುವುದು 10 ಲಕ್ಷ ಲೀಟರ್ ಮಾತ್ರ. ಕೆಎಂಎಫ್ ನಲ್ಲಿ 1.05 ಕೋಟಿ ಲೀಟರ್ ಹಾಲು ಸಂಗ್ರಹಿಸಿದರೂ ಮಾರಾಟ ಮಾಡುವುದು 48-50 ಲಕ್ಷ ಲೀಟರ್ ಮಾತ್ರ. ಉಳಿದ ಹಾಲನ್ನು ವಿವಿಧ ಪದಾರ್ಥಗಳ ಮೂಲಕ ಮಾರುತ್ತಿದ್ದೇವೆ. ಹಾಲಿನ ಬೆಲೆಯಲ್ಲಿ ಹೆಚ್ಚಳವಾದ 4 ರೂ. ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರೆ ಉತ್ಪನ್ನಗಳ ಬೆಲೆ ಏರಿಕೆ ಆಗಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟ ಸಂಸ್ಥೆ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 14 ಕೋಟಿ ನಷ್ಟದಲ್ಲಿದ್ದರೂ ರೈತರಿಗೆ ದರ ಕಡಿಮೆ ಮಾಡಲಿಲ್ಲ. ನಮ್ಮ ಮುಂದೆ ಸಾಕಷ್ಟು ಸವಾಲುಗಳಿತ್ತು” ಎಂದು ವಿವರಿಸಿದರು.
“ನಮ್ಮ ಒಕ್ಕೂಟದಲ್ಲಿ ಸಂಗ್ರಹಿಸುವ ಹಾಲಿನಲ್ಲಿ 65% ಅನ್ನು ಮಾತ್ರ ಮಾರಾಟ ಮಾಡಿದ್ದು, ಉಳಿದ ಹಾಲನ್ನು ಉತ್ಪನ್ನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಬೇರೆಯವರ ಜತೆ ಸ್ಪರ್ಧೆಗಾಗಿ ತಂದಿರುವ ವಿವಿಧ ಹಾಲುಗಳಾದ ಟೋನ್ಡ್ ಮಿಲ್ಕ್, ಸಮೃದ್ಧಿ, ಶುಭಂ ಹಾಲುಗಳಲ್ಲಿ 1 ರೂ, 20 ಪೈಸೆ, 2 ರೂ. ನಷ್ಟು ನಷ್ಟವಿದೆ. ಹೊಟೇಲ್ ಗಳಿಗೆ ಮಾರುವ 6 ಲೀಟರ್ ಪ್ಯಾಕೆಟ್ ಮೂಲಕ ಪ್ರತಿ ಲೀಟರ್ ಗೆ 1.60 ರೂ. ನಷ್ಟವಾಗುತ್ತದೆ. ಇದನ್ನು ನಾವು ಸರ್ಕಾರಕ್ಕೆ ಹೇಳಿದರೆ, ಸರ್ಕಾರವೂ ಒಪ್ಪಲ್ಲ, ನೀವು ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಆದರೂ ಇದು ರೈತರ ಸಂಸ್ಥೆಯಾಗಿರುವುದರಿಂದ ರೈತರಿಗೆ ಗೌರವ ಉಳಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಇಡೀ ರಾಷ್ಟ್ರದಲ್ಲಿ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವ ಸರ್ಕಾರ ಬೇರೊಂದಿಲ್ಲ” ಎಂದು ತಿಳಿಸಿದರು.
ನಷ್ಟದಲ್ಲಿರುವ ಒಕ್ಕೂಟವನ್ನು ಲಾಭಕ್ಕೆ ತರಲು ಏನೆಲ್ಲಾ ಸುಧಾರಣೆ ತಂದಿದ್ದೀರಿ ಎಂದು ಕೇಳಿದಾಗ, “ಮಾರುಕಟ್ಟೆಯಲ್ಲಿ ಸೋರಿಕೆ ತಡೆಗಟ್ಟಿದ್ದೇವೆ. ಸಾಗಾಣಿಕಾ ವೆಚ್ಚ ಕಡಿಮೆ ಮಾಡಿದ್ದೇವೆ, ಹಾಲಿನ ಗುಣಮಟ್ಟ ಹೆಚ್ಚಳ ಮಾಡಿದ್ದೇವೆ. ಚೀಸ್, ಪನೀರ್, ವೇ ಪೌಡರ್ ಉತ್ಪಾದನೆ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರದವರಿಗೆ 1.50 ಲಕ್ಷ ಲೀಟರ್ ಕೋ ಪ್ಯಾಕಿಂಗ್ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಮದರ್ ಡೈರಿ ಅವರಿಗೆ 2 ಲಕ್ಷ ಲೀಟರ್ ಮಾಡುತ್ತಿದ್ದೇವೆ. ಕನಕಪುರಲ್ಲಿರುವ ಮೆಗಾ ಡೈರಿ 14 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಮಂಡ್ಯ ಹಾಲು ಒಕ್ಕೂಟದಿಂದ 5 ಲಕ್ಷ ಹೆಚ್ಚುವರಿ ಹಾಲು ನೀಡಿ ಎಂದು ಕೆಎಂಎಫ್ ಅವರನ್ನೇ ಕೇಳಿದ್ದೆ. ಕನಕಪುರ ಡೈರಿಯಲ್ಲಿ 8 ವರ್ಷಗಳಿಂದ ಯಾವತ್ತೂ ನಾವು 14 ಲಕ್ಷ ಹಾಲು ಸಂಸ್ಕರಣೆ ಮಾಡಿಲ್ಲ. ಕಳೆದ ವರ್ಷದ ವರೆಗೂ ಅಲ್ಲಿ ಸರಾಸರಿ 4.50 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗಿತ್ತು. ಈ ವರ್ಷ 10-11 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಿದ್ದು, ಈಗ ಸರಾಸರಿ 8.50 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗುತ್ತಿದೆ. ನಮ್ಮ ಒಟ್ಟಾರೆ ವೆಚ್ಚ ತಗ್ಗುವಂತಾಗಿದೆ. ದುಂದುವೆಚ್ಚ ಕಡಿಮೆ ಮಾಡಲಾಗಿದೆ. ಸಿಬ್ಬಂದಿ, ಮಾರುಕಟ್ಟೆ ಸುಧಾರಣೆ ಮಾಡಲಾಗಿದೆ. ಸ್ಪರ್ಧೆಯಿಂದ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ” ಎಂದು ಉತ್ತರಿಸಿದರು.
ಖಾಸಗಿ ಸಂಸ್ಥೆಗಳಿಂದ ಸ್ಪರ್ಧೆ ಎದುರಿಸಲು ಎಲ್ಲಾ ಒಕ್ಕೂಟಗಳು ಒಟ್ಟಾಗಿ ಕೆಲಸ ಮಾಡಬಹುದಲ್ಲವೇ ಎಂದು ಕೇಳಿದಾಗ, “ಕೆಎಂಎಫ್ ಆಡಳಿತ ಮಂಡಳಿ ಇಲ್ಲ. ಆಡಳಿತ ಮಂಡಳಿ ಇಲ್ಲದಿರುವ ಕಾರಣ ಒಕ್ಕೂಟದ ಸದಸ್ಯರು ತೀರ್ಮಾನಮಾಡಲು ಆಗುವುದಿಲ್ಲ, ಎಲ್ಲಾ ಒಕ್ಕೂಟಗಳಲ್ಲೂ ಹೊಸ ಆಡಳಿತ ಮಂಡಳಿ ಬಂದಿವೆ. ಈಗ ಆಡಳಿತಾಧಿಕಾರಿಗಳ ಅಧಇಪತ್ಯದಲ್ಲಿ ನಡೆಯುತ್ತಿವೆ” ಎಂದರು.
ಹೊಸ ಆಡಳಿತ ಮಂಡಳಿ ಯಾವಾಗ ಬರುತ್ತದೆ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು. ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ನೀವೇ ಅಧ್ಯಕ್ಷರಾಗುತ್ತೀರಿ ಎಂಬ ಚರ್ಚೆ ಇದೆ. ನೀವು ಆಕಾಂಕ್ಷಿಗಳೇ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಧ್ಯಕ್ಕೆ ತೆಗೆದುಕೊಂಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಷ್ಟೇ ನಮ್ಮ ಗುರಿ. ನಾನು ಯಾವುದಕ್ಕೂ ಆಕಾಂಕ್ಷಿಯಲ್ಲ. ಈ ಸ್ಥಾನದ ಆಕಾಂಕ್ಷಿಯೂ ಅಲ್ಲ. ಈಗಲೂ ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿದರೆ ನಾನು ನೆಮ್ಮದಿಯಾಗಿ ಹೋಗುವೆ. ಇದೆಲ್ಲವೂ ಜವಾಬ್ದಾರಿಯುತ ಸ್ಥಾನಗಳು, ಅಪೇಕ್ಷೆಪಟ್ಟು ಯಾವುದೇ ಹುದ್ದೆಗೆ ಹೋಗಬಾರದು” ಎಂದು ಹೇಳಿದರು.
ಕೇವಲ 8 ತಿಂಗಳಲ್ಲಿ ಸಂಸ್ಥೆಯನ್ನು ಲಾಭಕ್ಕೆ ತಂದಿದ್ದು, ಕೆಎಂಎಫ್ ಅಧ್ಯಕ್ಷರಾದರೆ ಇಡೀ ರಾಜ್ಯದ ರೈತರಿಗೆ ನೆರವಾಗುತ್ತದೆಯಲ್ಲವೇ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಎಂಎಫ್ ಬಗ್ಗೆ ನಾನು ಅಧ್ಯಯನ ಮಾಡಿಲ್ಲ. ನಾನು ಕೇವಲ ಬಮೂಲ ಬಗ್ಗೆ ಮಾತ್ರ ಅಧ್ಯಯನ ಮಾಡಿದ್ದು, ಅದರ ಬಗ್ಗೆ ಮಾತ್ರ ಆಲೋಚಿಸುತ್ತಿದ್ದೇನೆ. ನಾನು ನಮ್ಮ ಒಖ್ಕೂಟ, ನಮ್ಮ ರೈತರು, ನಮ್ಮ ಗ್ರಾಹಕರು, ನಮ್ಮ ಉತ್ಪನ್ನಗಳ ಬಗ್ಗೆ ಮಾತ್ರ ಗಮನಹರಿಸುತ್ತಿದ್ದೇನೆ ಹೊರತು ಬೇರೆಯದರ ಬಗ್ಗೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆದು ಸಿಎಂ ಆಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಾನು ಸಾಮಾಜಿಕ ಜಾಲತಾಣ ನೋಡುವುದಿಲ್ಲ. ಹೀಗಾಗಿ ನನಗೆ ಅದರ ಬಗ್ಗೆ ಗೊತ್ತಿಲ್ಲ” ಎಂದು ತಿಳಿಸಿದರು.


