Menu

ನೀರಿನ ಸಮಸ್ಯೆ: ಸರ್ಕಾರ ಎಚ್ಚರ ತಪ್ಪದಿರಲಿ

ರಾಜ್ಯದ ಬಹುತೇಕ ಗ್ರಾಮಗಳಲ್ಲಿ ನೀರಿನ ಪಂಪಿಂಗ್ ಕೇಂದ್ರಗಳಿಗೆ ಕರೆಂಟ್ ಪೂರೈಸುವ ಸೂಕ್ತ ವ್ಯವಸ್ಥೆಯೇ ಇಲ್ಲ ! ದುರಸ್ತಿ ಕಾಣದ ಜನರೇಟರ್ ಮತ್ತು ಟ್ರಾನ್ಸ್‌ಫಾರ್ಮರ್. ಕೆಟ್ಟ ಮೋಟಾರ್. ಈ ಹಲವು ಹತ್ತು ತೊಡಕುಗಳು ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಗಳಿಗೆ ಕಾರಣವಾಗಿವೆ. ಇಂತಹ ಸಮಸ್ಯೆಗಳು ತೀವ್ರ ಘಟ್ಟಕ್ಕೆ ತಲುಪುವುದೇ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನ ಕಡು ಬಿಸಿಲಿನ ಕಾಲದಲ್ಲಿ.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನ- ಜಾನುವಾರುಗೆ ಬಿಂದಿಗೆ ನೀರಿಗೂ ಕೊರತೆ ಕಂಡಿದೆ. ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ರಾಯಚೂರು ಅಲ್ಲದೆ ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಮರುಕಳಿಸಿದೆ.

ಶಾಲೆ ಮತ್ತು ಕಾಲೇಜುಗಳ ಪರೀಕ್ಷೆ ಸಮೀಪಿಸಿದೆ. ಈ ದಿಶೆಯಲ್ಲಿ ಜಿಲ್ಲಾಡಳಿತ ನಿಗಾ ವಹಿಸುವುದು ಲೇಸು. ನೀರಿನ ಸಮಸ್ಯೆ ಜೊತೆಗೆ ಕರೆಂಟ್ ಸಮಸ್ಯೆ ಕೂಡಾ ಸೇರಿದೆ . ಬಹುತೇಕ ಗ್ರಾಮಗಳಲ್ಲಿ ನೀರಿನ ಪಂಪಿಂಗ್ ಕೇಂದ್ರಗಳಿಗೆ ಕರೆಂಟ್ ಪೂರೈಸುವ ಸೂಕ್ತ ತಾಂತ್ರಿಕ ವ್ಯವಸ್ಥೆ ಇಲ್ಲ, ದುರಸ್ರಿ ಕಾಣದ ಜನರೇಟರ್ ಮತ್ತು ಟ್ರಾನ್ಸ್‌ಫಾರ್ಮರ್, ಕೆಟ್ಟ ಮೋಟಾರ್.. ಹೀಗೆ ಹಲವು ಹತ್ತು ಸಮಸ್ಯೆಗಳಿಗೆ ಕಾರಣವಾಗಿದೆ. ಇನ್ನು ಕೆಲವು ಕಡೆ ತಾಂತ್ರಿಕ ಪರಿಕರಗಳು ಸರಿಯಾಗಿದ್ದರೂ ವಿದ್ಯುತ್ ಪೂರೈಕೆಗೆ ಕೆಲವೊಂದು ಆಡಳಿತಾತ್ಮಕ ಸಮಸ್ಯೆ. ಇವೆಲ್ಲ ಸರಿಯಾಗಿದ್ದರೆ ನೀರಿನ ಕೊರತೆಯ ಸಮಸ್ಯೆ.! ಇಂತಹ ಸಮಸ್ಯೆಗಳು ತೀವ್ರ ಘಟ್ಟಕ್ಕೆ ತಲುಪುವುದೇ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನ ಕಡು ಬಿಸಿಲ ಕಾಲದಲ್ಲಿ .

ಜಿಲ್ಲಾಡಳಿತ ಈ ವಿಚಾರದಲ್ಲಿ ಪೂರ್ವಭಾವಿಯಾಗಿ ಸೂಕ್ತ ಕ್ರಮ ವಹಿಸುವುದು ನಿಯಮ. ಈ ವೇಳೆಗಾಗಲೇ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು ಕುಡಿ ಯುವ ನೀರಿನ ಸಾಧಕ= ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಬಾಯಾರಿಕೆ ಆದಾಗ ಬಾಯಿ ತೋಡುವ ಪ್ರವೃತ್ತಿ ಸಲ್ಲದು. ಅಧಿಕಾರಿಗಳ ಆಲಸ್ಯತನ ದಿಂದಲೂ ಇಂದು ಈ ಸಮಸ್ಯೆ ಕೆಲವು ಕಡೆ ತೀವ್ರ ಸ್ಥಾಯಿ ತಲುಪಿದೆ.

ಈ ಸಾರಿ ರಾಜ್ಯದ ಬಹುತೇಕ ಮಳೆಯಾಗಿ ಕೆರೆ ಕುಂಟೆಗಳು ತುಂಬಿದ್ದರೂ ಈ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಬತ್ತಿ ಹೋದ ಕೆರೆ ಕುಂಟೆ ಮತ್ತು ಕೊಳವೆ ಬಾವಿಗಳ ಸ್ಥಿತಿಗತಿಯೂ ಕಳವಳಕಾರಿ. ಈ ದಿಶೆಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಈ ಕುರಿತ ಸಮಗ್ರ ಮಾಹಿತಿ ಇರಬೇಕು. ಮುಂದಿನ ಮೂರು , ನಾಲ್ಕು ತಿಂಗಳು ಸರ್ಕಾರ ರಾಜ್ಯದ ಕುಡಿಯುವ ನೀರಿನ ಸಮಸ್ಯೆ ನೀಗುವ ದಿಶೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಭೆ ಮತ್ತು ಸ್ಥಳ ಪರಿಶೀಲನೆ ಅಗತ್ಯ. ಜೀವನದಿಗಳು ಮತ್ತು ಅಂತರ್ಜಲ ಮೂಲದಿಂದ ದೊರೆಯುವ ನೀರಿನ ಪ್ರಮಾಣ ಸಾಲದಿದ್ದರೆ ಸರ್ಕಾರದ ಮುಂದಿನ ಕ್ರಮವೇನು ? ಇದು ಕಾನೂನು ಮತ್ತು ಶಾಂತಿಪಾಲನೆಗೆ ಸಂಬಂಧಿಸಿದ ವಿಷಯ. ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ನದಿ ನೀರನ್ನೇ ನೆಚ್ಚಿರುವ ಬೆಂಗಳೂರು ಮುಂದಿನ ಮೂರು ತಿಂಗಳಿಗೆ ಯಾವ ಬಗೆಯ ಕ್ರಿಯಾ ಯೋಜನೆ ಕೈಗೆತ್ತಿ ಕೊಂಡಿದೆ ಎಂಬುದು ಬಹುಮುಖ್ಯ. ಒಟ್ಟಿನಲ್ಲಿ ಮುಂದಿನ ಮುಂಗಾರು ಆರಂಭದವರೆಗೆ ಕುಡಿಯುವ ನೀರಿನ ವಿಷಯವನ್ನು ರಾಜ್ಯ ಸರ್ಕಾರ ಸಮಪ ಕ ರೀತಿಯಲ್ಲಿ ನಿರ್ವಹಿಸಲು ಮುತುವರ್ಜಿ ವಹಿಸುವುದು ಅನಿವಾರ್ಯ.

Related Posts

Leave a Reply

Your email address will not be published. Required fields are marked *