ದಕ್ಷಿಣ ಕನ್ನಡ ಜಿಲ್ಲೆಯ ದೇವಳಗಳಲ್ಲಿ ನಿತ್ಯವೂ ಭಕ್ತರಿಗೆ ಶುಚಿ, ರುಚಿಯಿಂದ ಕೂಡಿದ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಸಂತರ್ಪಣೆ, ಬೆಳಗಿನ ಉಪಾಹಾರಗಳನ್ನು ಸಿದ್ಧಪಡಿಸುವಲ್ಲಿ ಎಲ್‌ಪಿಜಿ ಸಮಸ್ಯೆ ಯನ್ನು ಎದುರಿಸಲು ಆಡಳಿತ ಮಂಡಳಿಗಳು ನಿತ್ಯದ ಮೆನುಗಳಲ್ಲಿ ಬದಲಾಣೆಗೆ ಮುಂದಾಗಿವೆ. ಕಟೀಲು ದುರ್ಗಾಪರಮೇಶ್ವರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಸಿಲಿಂಡರ್ ಪೂರೈಕೆ ಆಗದೆ ಇದ್ದರೆ ಕಟ್ಟಿಗೆ ಒಲೆಗೆ ಬಳಸಿ ಭಕ್ತರ ಹಸಿವು ತಣಿಸುವ ಕೆಲಸಕ್ಕೆ ದೇವಳ ಆಡಳಿತ ಮಂಡಳಿಗಳು ದಿಟ್ಟಹೆಜ್ಜೆ ಇಟ್ಟಿವೆ.
ಇರಾನ್- ಇಸ್ರೇಲ್ ಯುದ್ಧದ ಭಾಗವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಹೊತ್ತಿ ಉರಿಯುತ್ತಿರುವುದರಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕರಾವಳಿಯ ದೇವಸ್ಥಾನಗಳಿಗೂ ಇದರ ಬಿಸಿ ತಟ್ಟಿದೆ. ಕೆಲವು ದೇವಳಗಳಲ್ಲಿ ಅನ್ನಪ್ರಸಾದ ವಿತರಣೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡಬಾರದು ಎಂಬ ಉದ್ದೇಶದಿಂದ ದೇವಳಗಳ ಆಡಳಿತ ಮಂಡಳಿಗಳು ಕಟ್ಟಿಗೆ ಬಳಕೆ ಮಾಡುವ ಮೂಲಕ ಭಕ್ತರ ಹಸಿವು ತಣಿಸುವ ಮಹಾತ್ಕಾರ್ಯ ಮುಂದುವರಿಸಲು ದೃಠ ನಿರ್ಧಾರ ತಾಳಿದ್ದಾರೆ.
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನ್ನಪ್ರಸಾದ ವ್ಯವಸ್ಥೆಗೆ ಇನ್ನೊಂದು ದಿನದ ಮಟ್ಟಿಗೆ ಗ್ಯಾಸ್ ವ್ಯವಸ್ಥೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಪ್ರತಿದಿನ ಸಾವಿರಾರೂ ಮಂದಿ ಭಕ್ತರು ಅನ್ನಪ್ರಸಾದ ಸೇವನೆ ಮಾಡುತ್ತಾರೆ. ಇಲ್ಲಿನ ಶಾಲೆಗಳ ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಕೂಡ ಗ್ಯಾಸ್ ಸಿಲಿಂಡರ್ ಅವಲಂಬಿಸಿದೆ. ಆದರೆ ಇವೆಲ್ಲ ಸಮಸ್ಯೆಗಳನ್ನು ಎದುರಿಸಲು ದೇವಳಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.
ಕಟ್ಟಿಗೆಯಲ್ಲಿ ಅಡುಗೆ ಮಾಡುವ ಅನುಭವಿಗಳು ಇದ್ದಾರೆ. ಅದಕ್ಕಾಗಿ ಕಟ್ಟಿಗೆ ಸಂಗ್ರಹ ಮಾಡಲಾಗುತ್ತದೆ. ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದ ಹಾಗೇ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ. ಪ್ರಸಾದ ಮೆನುವಿನಲ್ಲಿ ಭಾರಿ ಪ್ರಮಾಣ ಬದಲಾವಣೆ ಮಾಡಲ್ಲ, ಅನ್ನ, ಸಾರು, ಪಾಯಸ್ ಇರುತ್ತದೆ. ಪಲ್ಯದ ಬದಲಾಗಿ ಚಟ್ನಿ ತಯಾರಿ ಮಾಡುತ್ತೇವೆ. ಎಲ್ಲವೂ ಸರಿ ಹೋದರೆ ಯಾವುದೇ ಬದಲಾವಣೆ ಇಲ್ಲ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ.
ಕುಕ್ಕೆ ಅನ್ನಪ್ರಸಾದಕ್ಕೂ ಪ್ರತಿನಿತ್ಯ 20 ಸಿಲಿಂಡರ್ ಅಗತ್ಯ ಇದ್ದು, ಈಗ 18 ಮಾತ್ರ ಪೂರೈಕೆ ಆಗುತ್ತಿವೆ. ಗ್ಯಾಸ್ ಪೂರೈಕೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಪಲ್ಯ ಮಾಡಲಾಗುವುದಿಲ್ಲ. ಅನ್ನ, ಸಾಂಬಾರು, ಚಟ್ನಿ, ಪಾಯಸ , ಮಜ್ಜಿಗೆ ಮಾಡಲಾಗುತ್ತದೆ. ಬೆಳಗಿನ ಉಪಹಾರದ ಮೆನುವಿನಲ್ಲಿ ಅವಲಕ್ಕಿ ನೀಡಲಾಗುತ್ತದೆ. ಹೆಸರು ಬೆಳೆ ನೀಡಲಾಗುತ್ತದೆ. ದಿನ ಬಿಟ್ಟು ಹೆಸರು ಬೆಳೆ ನೀಡಲಾಗುತ್ತಿತ್ತು, ಆದರೆ ಈಗ ಎರಡು ದಿನ ಅವಲಕ್ಕಿ ನೀಡುತ್ತೇವೆ ಎಂದು ಕುಕ್ಕೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತ್ತಕುಡಿ ತಿಳಿಸಿದ್ದಾರೆ.
ಕಟೀಲು ಹಾಗೂ ಕುಕ್ಕೆ ಕ್ಷೇತ್ರಗಳಲ್ಲಿ ದಿನನಿತ್ಯ ಬರುವ ಭಕ್ತರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಒಂದು ವೇಳೆ ಸಂಪೂರ್ಣವಾಗಿ ಸ್ಥಗಿತ ಆದಲ್ಲಿ ಭಕ್ತರ ಹಸಿವು ತಣಿಸುವ ಪ್ರಸಾದ ತಯಾರಿಗೆ ಕಟ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಬಿಕ್ಬಾಕಟ್ರಿಟು ಉಂಟಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಕೆಲ ಸಣ್ಣ ಪ್ರಮಾಣದ ಹೊಟೇಲ್ ಸೇರಿದಂತೆ ದೊಡ್ಡ ದೊಡ್ಡ ಹೊಟೇಲ್ ರೆಸ್ಟೊರೆಂಟ್ ಗಳಲ್ಲಿ ಇನ್ನು ಎರಡು ದಿನಗಳಲ್ಲಿ ಬಾಗಿಲು ಮುಚ್ಚುವ ಸನ್ನಿವೇಶ ಸೃಷ್ಟಿಯಾಗಿದೆ. ಹೊಟೇಲ್ ಗಳಲ್ಲಿ ಮೆನು ಕೂಡ ಬದಲಾವಣೆ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ದುಪ್ಪಟ್ಟು ದರ ಕೊಟ್ಟು ಸಿಲಿಂಡರ್ ಖರೀದಿ ಮಾಡುತ್ತಿರುವ ಸನ್ನಿವೇಶಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗೆ ಆದಲ್ಲಿ ಹೊಟೇಲ್ ಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೊಟೇಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.


