ಜೆಡಿಯು ಮತ್ತು ತೆಲುಗುದೇಶಂ ಪಕ್ಷದ ನಾಯಕರ ಹೆಬ್ಬಯಕೆಗಳನ್ನು ಬದಿಗಿತ್ತು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈಗ ತನ್ನ ದೈನಂದಿನ ಆಡಳಿತದ ರಥವವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಕಟು ರಾಜಕೀಯ ಸತ್ಯ. ದಿಲ್ಲಿ ರಾಜಕಾರಣಕ್ಕೆ ಚಂದ್ರಬಾಬು ನಾಯ್ಡು ಖಂಡಿತವಾಗಿಯೂ ಪ್ರವೇಶಿಸುವುದಿಲ್ಲ. ಆದರೆ ಬಾಬು ಆಪ್ತಮಿತ್ರರಾದ ನಿತೀಶ್ ದಿಲ್ಲಿಯಲ್ಲಿದ್ದರೆ ಟಿಡಿಪಿಗೂ ಇದು ಕ್ಷೇಮ.
ದೇಶ ರಾಜಕಾರಣದತ್ತ ನಿತೀಶ್‌ಕುಮಾರ್ ಮತ್ತೆ ಮುಖ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ನಿತೀಶ್ ಕೆಳಗಿಳಿಯುವರೆಂಬ ಸುದ್ದಿ ಈಗ ರಾಷ್ಟ್ರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, ಇದೇ ವೇಳೆ ಬಿಹಾರದಲ್ಲಿ ಜೆಡಿಯು ಮುಂದಿನ ಭವಿಷ್ಯದ ಬಗ್ಗೆಯೂ ಚಿಂತನ, ಮಂಥನ ಶುರುವಾಗಿದೆ.
ಕಳೆದ ಎರಡೂವರೆ ದಶಕಗಳ ದೇಶದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಿತೀಶ್‌ಕುಮಾರ್ ವಹಿಸಿದ ಪಾತ್ರ ಸಾಮಾನ್ಯವಾದುದಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನಿತೀಶ್‌ಕುಮಾರ್ ಅನಿವಾರ್ಯ ಎಂಬುದನ್ನು ಕಳೆದ ಲೋಕಸಭೆ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಒಮ್ಮೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಅನ್ನು ಅಪ್ಪಿಕೊಂಡು ಸರ್ಕಾರ ರಚಿಸುವ ಇವರು, ಮತ್ತೊಮ್ಮೆ ಬಿಜೆಪಿ ಸಖ್ಯ ಬೆಳೆಸಿ ತಾವು ಅಧಿಕಾರದಲ್ಲಿರುವ ಯಶಸ್ವಿ ರಾಜಕೀಯ ಸೂತ್ರವನ್ನು ಹಣೆಯುವ ಮಹಾಜಾಣ.
ಬಿಹಾರ ರಾಜಕಾರಣದಿಂದ ನಿತೀಶ್‌ಕುಮಾರ್ ದೂರವಾಗುವುದರಿಂದ ಇದು ನೇರವಾಗಿ ಬಿಜೆಪಿಗೆ ಅನುಕೂಲವಾಗುವಂತಹ ಸಂಗತಿ. ನಿತೀಶ್‌ಕುಮಾರ್ ನಂತರ ಬಿಹಾರದಲ್ಲಿ ಜೆಡಿಯು ಅನ್ನು ಜಯದ ಹಾದಿಯಲ್ಲಿ ಮುನ್ನಡೆಸುವ ಸಮರ್ಥ ನಾಯಕ ಯಾರೂ ಇಲ್ಲ. ಇದೇ ವೇಳೆ ಲಾಲೂ ಪ್ರಸಾದ್ ಯಾದವ್ ಕುಟುಂಬ ಇದರ ಲಾಭವನ್ನು ಪಡೆದು ಮತ್ತೆ ಅಧಿಕಾರದತ್ತ ದಾಪುಗಾಲು ಹಾಕಲು ನಿತೀಶ್‌ಗೆ ಇಷ್ಟವಿಲ್ಲ ಮತ್ತು ಬಿಜೆಪಿಯೂ ಈ ವಿಷಯದಲ್ಲಿ ಗಂಭೀರ ನಿಲುವು ತಾಳಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಸೀಟುಗಳ ಸಂಖ್ಯೆ ಮತ್ತು ಯಶಸ್ವಿಯ ಪ್ರಮಾಣ ತೃಪ್ತಿಕರವಾಗಿದೆ. ಇಲ್ಲಿಯವರೆಗೆ ಬಿಹಾರದಲ್ಲಿ ಬಿಜೆಪಿಗೆ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿಲ್ಲ. ಆರ್‌ಜೆಡಿ ಮತ್ತು ಜೆಡಿಯು ನೆರವಿನಿಂದಲೇ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಈಗ ತನ್ನ ರಣತಂತ್ರವನ್ನು ಬದಲಿಸಿದೆ. ರಾಜ್ಯಸಭೆಗೆ ನಿತೀಶ್‌ಕುಮಾರ್ ಚುನಾಯಿತರಾದರೆ ಅವರು ಕೇಂದ್ರ ಸಂಪುಟದಲ್ಲಿ ಗುರುತರ ಖಾತೆ ಪಡೆಯುವುದೂ ಖಚಿತ. ಸಮಯಕ್ಕೆ ತಕ್ಕಂತೆ ರಾಜಕೀಯ ಬಲೆ ಹಣೆಯುವ ಈ ಜೆಡಿಯು ನಾಯಕನಿಗೆ ಇತ್ತ ಕೇಂದ್ರ ಸರ್ಕಾರ ಮತ್ತು ಅತ್ತ ಬಿಹಾರದ ಮೇಲೆ ಪಾರುಪತ್ಯ ಎರಡನ್ನೂ ನಿಯಂತ್ರಿಸಬೇಕೆಂಬ ಉದ್ದೇಶವಿದೆ.
ಕೇಂದ್ರ ಸರ್ಕಾರದ ಕೆಲವೊಂದು ತೀರ್ಮಾನಗಳು ಮತ್ತು ನಡೆಯನ್ನು ಕಂಡ ಬಿಹಾರದ ಮುಖ್ಯಮಂತ್ರಿಗೆ ತಾನು ದಿಲ್ಲಿ ರಾಜ ಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುವುದು ಅನಿವಾರ್ಯ ಎಂದೆನಿಸಿದ್ದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಜೆಡಿಯು ಮತ್ತು ತೆಲುಗುದೇಶಂ ಪಕ್ಷದ ನಾಯಕರ ಹೆಬ್ಬಯಕೆಗಳನ್ನು ಬದಿಗಿತ್ತು ಎನ್‌ಡಿಎ ಸರ್ಕಾರ ಈಗ ತನ್ನ ದೈನಂದಿನ ಆಡಳಿತದ ರಥವವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಕಟು ರಾಜಕೀಯ ಸತ್ಯ. ದಿಲ್ಲಿ ರಾಜಕಾರಣಕ್ಕೆ ಚಂದ್ರಬಾಬು ನಾಯ್ಡು ಖಂಡಿತವಾಗಿಯೂ ಪ್ರವೇಶಿಸುವುದಿಲ್ಲ. ಆದರೆ ಬಾಬು ಆಪ್ತಮಿತ್ರರಾದ ನಿತೀಶ್ ದಿಲ್ಲಿಯಲ್ಲಿದ್ದರೆ ಟಿಡಿಪಿಗೂ ಇದು ಕ್ಷೇಮ ! ಎನ್‌ಡಿಎ ಸರ್ಕಾರದಲ್ಲಿ ಭಾಗಿಯಾದ ದಿಲ್ಲಿ ಬಿಜೆಪಿ ಮುಖಂಡರ ಕೆಲವೊಂದು ಏಕಪಕ್ಷೀಯ ತೀರ್ಮಾನಗಳಿಗೆ ಲಗಾಮು ಹಾಕಲು ಈಗ ನಿತೀಶ್‌ಕುಮಾರ್ ಮತ್ತು ಬಾಬು ಹಣೆದ ಜಂಟಿ ರಾಜಕೀಯ ರಣತಂತ್ರವಿದು. ಪ್ರಸಕ್ತ ಸನ್ನಿವೇಶದಲ್ಲಿ ನಿತೀಶ್ ಅವರ ರಾಜಕೀಯ ತೀರ್ಮಾನಗಳ ಹಿಂದೆ ಚಂದ್ರಬಾಬು ಪರೋಕ್ಷ ಹಸ್ತವಿದ್ದರೂ ಅಚ್ಚರಿಯಿಲ್ಲ.


