ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕೇಂದ್ರ ಸಚಿವರಾಗಿರುವ ಹೆಚ್‌ಡಿ ಕುಮಾರಸ್ವಾಮಿಯವರೇ ಕಾರಣ, ಸಿಡಿ ಹೊರತಂದಿದ್ದೇ ಅವರು. ಷಡ್ಯಂತ್ರ ಮಾಡಿ ಪ್ರಜ್ವಲ್‌ನ ಜೈಲಿಗೆ ಹಾಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ.
ಮನಸ್ಸು ಮಾಡಿದ್ದರೆ ದೇವೇಗೌಡರೇ ತಮ್ಮ ಮೊಮ್ಮಗನನ್ನು ಜೈಲಿಂದ ಬಿಡಿಸಿ ಹೊರತರಬಹುದಿತ್ತು, ಷಡ್ಯಂತ್ರ ಮಾಡಿ ಪ್ರಜ್ವಲ್‌ನ ಜೈಲಿಗೆ ಹಾಕಿಸಿದ್ದಾರೆ, ಅಣ್ಣನ ಮಗನ (ಪ್ರಜ್ವಲ್) ಬೆಳವಣಿಗೆ ಸಹಿಸಿಕೊಳ್ಳದ ಕುಮಾರಸ್ವಾಮಿ, ತಮ್ಮ ಮಗನನ್ನು ಬೆಳೆಸಲು ಅಣ್ಣನ ಮಗನನ್ನು ಜೈಲಿಗೆ ಹಾಕಿಸಿದ್ದಾರೆ ಎಂದು ದೂರಿದ್ದಾರೆ.
ನಿಖಿಲ್ ಮಗ ನಿಖಿಲ್ ಚುನಾವಣೆಯಲ್ಲಿ ಗೆದ್ದಿಲ್ಲ ಎಂದು ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ದಾರೆ, ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಸಿಡಿ ಬಿಡಿಸಿದ್ದೆ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ನಗರಸಭೆಗೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯಲ್ಲಿ ಪ್ರತಿಭಟನೆಗೆ ಹೆಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕದಲೂರು ಉದಯ್, ಅಭಿವೃದ್ಧಿ ಆಗ್ತಿರುವ ವಿಚಾರಕ್ಕೆ ಹೋರಾಟ ಮಾಡೋದಾ, ಹೋರಾಟ ಇಷ್ಟ ಬಂದ ಹಾಗೆ ಮಾಡಬಹುದಾ ಎಂದು ಪ್ರಶ್ನಿಸಿದ್ದಾರೆ.
50 ಸಾವಿರ ಜನರನ್ನು ಕರೆದುಕೊಂಡು ಬೆಂಗಳೂರಿಗೆ ಪಾದಯಾತ್ರೆ ಮಾಡ್ತಾರಂತೆ. ದೆಹಲಿಗೆ ಪಾದಯಾತ್ರೆ ಹೋಗಲಿ, ವ್ಯಾಯಾಮ ಆದ್ರೂ ಆಗುತ್ತದೆ. ಆರೋಗ್ಯ ಸ್ವಲ್ಪ ವೃದ್ಧಿ ಆಗುತ್ತದೆ. ಇಲ್ಲಿ ಬಂದು ಉಪದೇಶ ಮಾಡಬೇಕಿಲ್ಲ, ಬಡವರ ಮಕ್ಕಳು, ರೈತರ ಮಕ್ಕಳು ಬೆಳೆಯ ಬಾರದು ಅಂತ ಇಲ್ಲಿ ರಾಜಕೀಯ ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ.
ಕುಮಾರಸ್ವಾಮಿ ಅವರಿಗೆ ಅವರ ಕುಟುಂಬ ಮಾತ್ರ ಬೆಳೆಯಬೇಕು. ಹುಟ್ಟಿರುವ ಮೊಮ್ಮಗನಿಗೂ ಒಂದು ಜಾಗ ಮಾಡಿಕೊಡಲು ಪ್ರಯತ್ನ ಮಾಡ್ತಿದ್ದಾರೆ. ಕುಟುಂಬದ ಎಲ್ಲರಿಗೂ ಜಾಗ ಮಾಡಿದ್ದು ಆಯ್ತು. ಬೇರೆ ಯಾರೂ ಇವರ ಮುಂದೆ ಬೆಳೆಯ ಬಾರದೆಂದು ರಾಜಕೀಯ ಮಾಡ್ತಾರೆ. ಇವರ ಜೊತೆ ಇದ್ದ ಬಚ್ಚೆಗೌಡ, ನಾಗೇಗೌಡ, ಸಿದ್ದರಾಜುರನ್ನು ಬೆಳೆಯಲು ಬಿಟ್ಟಿಲ್ಲ ಎಂದರು.
ಕುಮಾರಸ್ವಾಮಿಗೆ ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ, 60-70 ಎಕರೆ ಜಮೀನು ಕೊಡ್ತೀನಿ. ಯಾವ ಕೈಗಾರಿಕೆ ತರುತ್ತಾರೆ ಎಂದು ಹೇಳಲಿ. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಬೇಕು, ರೈತರ ಕಷ್ಟ ತಿಳಿದಿರಬೇಕು. ಭಾಷಣ, ಟಿವಿ ಮುಂದೆ ಹೇಳಿದರೆ ಅಭಿವೃದ್ಧಿ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


