ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕ ನಡೆಸಿದ ದಾಳಿಯಲ್ಲಿ ಖಮೇನಿ ಸಾವಿನ ಬಳಿಕ ಇರಾನ್ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ದಾಳಿ ನಡೆಸಿದೆ. ದಾಳಿ, ಪ್ರತಿದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪರಿಣಾಮವಾಗಿ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿ, ದೇಶದಲ್ಲಿ ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಜಾಗರೂಕತೆಯಿಂದ ಇರಬೇಕು. ಅಶಾಂತಿ ಪ್ರಚೋದಿಸುವ ಇರಾನ್ ಪರ ಮೂಲಭೂತ ಪ್ರಚಾರಕರ ಮೇಲೆ ನಿಗಾವಹಿಸುವಂತೆ ಸೂಚಿಸಿದೆ.
ವಿಶೇಷವಾಗಿ ಧಾರ್ಮಿಕ ಕೂಟಗಳಲ್ಲಿ ಉದ್ರೇಕಿತ ಭಾಷಣಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳು ಎಚ್ಚರಿಕೆಯಿಂದಿರಬೇಕು. ಇರಾನ್ ಪರ ಮೂಲಭೂತ ಪ್ರಚಾರಕರ ಮೇಲ್ವಿಚಾರಣೆ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಲು ಗುಪ್ತಚರ ಸಂಸ್ಥೆಗಳು ಭದ್ರತಾ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಶಿಯಾ ಮುಸ್ಲಿಮರು ಭಾನುವಾರ ಭಾರತದ ಹಲವೆಡೆ ಪ್ರತಿಭಟನೆ ನಡೆಸಿದರು. ಚಿಕ್ಕಬಳ್ಳಾಪುರದ ಅಲಿಪುರ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಗ್ರಾಮದಲ್ಲಿನ ಅಂಗಡಿ ಬಂದ್ ಮಾಡಿದ್ದು, ಶೋಕಾಚರಣೆ ಮಾಡಲು ಮುಂದಾಗಿದ್ದಾರೆ. ಮೂರು ದಿನ ಕರಾಳ ದಿನ ಆಚರಿಸಲು ನಿರ್ಧರಿಸಿದ್ದಾರೆ. ಮಸೀದಿ ಬಳಿಗೆ ಹೋಗಿ ಖಮೇನಿ ಸಾವಿಗೆ ಗೌರವ ಅರ್ಪಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ.


