Menu

ಖಮೇನಿ ಮಾತ್ರವಲ್ಲ, ಇರಾನ್‌ನ 48 ನಾಯಕರನ್ನು ಹೊಡೆದುರುಳಿಸಿದ್ದೇವೆ ಎಂದ ಟ್ರಂಪ್‌

ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ಭೀಕರ ದಾಳಿಗಳನ್ನು ನಡೆಸಿದ್ದು, ಅಲ್ಲಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಮಾತ್ರವಲ್ಲದೆ ಅಲ್ಲಿನ 48 ನಾಯಕರನ್ನು ಹೊಡೆದುರುಳಿಸಿರುವುದಾಗಿ ಡೊನಾಲ್ಡ್ ಟ್ರಂಪ್‌ ಮಾಹಿತಿ ನೀಡಿದ್ದಾರೆ.

ಈ ದಾಳಿಯಲ್ಲಿ ನಾವು ಪಡೆಯುತ್ತಿರುವ ಯಶಸ್ಸು ನಂಬಲು ಆಗದಷ್ಟು, ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಅಂತ್ಯ ಕಂಡಿದ್ದಾರೆ. ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಸಾಗುತ್ತಿದೆ. ಇನ್ನೆಷ್ಟು ಗುರಿಗಳುತಲುಪಬೇಕಿವೆ ಎಂಬುದು ಕೂಡ ಸ್ಪಷ್ಟವಾಗಿ ಗೊತ್ತಿದೆ ಎಂದು ವಿವರಿಸಿದ್ದಾರೆ. ಇರಾನ್ ವಿರುದ್ಧ ಆರಂಭಿಸಿರುವ ದಾಳಿ ಕಾರ್ಯಾಚರಣೆ 4 ವಾರ ಮುಂದುವರಿಬಹುದು. ನಮ್ಮ ಉದ್ದೇಶ ಸಂಪೂರ್ಣವಾಗಿ ಸಾಧಿಸುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ.

ಇರಾನ್‌ ಮೇಲಿನ ಅಮೆರಿಕ ಇಸ್ರೇಲ್ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಇರಾನ್ ಕೂಡ ಪ್ರತಿದಾಳಿ ಮುಂದುವರಿಸಿ ಅಮೆರಿಕದ ಸೇನಾ ನೆಲೆಗಳನ್ನು ನಾಶಪಡಿಸಿದೆ. ಇರಾನ್‌ಗೆ ಮಧ್ಯಂತರ ನಾಯಕನ ಆಯ್ಕೆಯಾಗಿದ್ದು ಶೀಘ್ರವೇ ಕಾಯಂ ನಾಯಕನ ಆಯ್ಕೆಯೂ ಆಗಲಿದೆ.

ಇರಾನ್ ಕೋಮ್ ನಗರದ ಪ್ರಸಿದ್ಧ ಶಿಯಾ ಮಸೀದಿ ಜಮ್ಕರನ್ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವ ಮೂಲಕ ತೀವ್ರ ಸ್ವರೂಪದ ಪ್ರತಿದಾಳಿಯ ಸಂದೇಶ ನೀಡಿದೆ. ಶಿಯಾ ಸಂಪ್ರದಾಯದಲ್ಲಿ ಕೆಂಪು ಧ್ವಜವು ಅನ್ಯಾಯವಾಗಿ ಚೆಲ್ಲಿದ ರಕ್ತ ವನ್ನು ಸಂಕೇತಿಸುತ್ತದೆ ಮತ್ತು ಹತನಾದ ವ್ಯಕ್ತಿಯ ಸೇಡು ತೀರಿಸಿಕೊಳ್ಳಲು ಕರೆಯಾಗಿರುತ್ತದೆ.

ಯುದ್ಧ ಹೀಗೆ ಮುಂದುವರಿದರೆ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಭಾರತದ ಆರ್ಥಿಕತೆಗೆ ಬಹು ದೊಡ್ಡ ಹೊಡೆತದೊಂದಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ ಜೊತೆಗೆ. ರಾಜತಾಂತ್ರಿಕವಾಗಿ ಸಮಸ್ಯೆ ಆಗಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಇರಾಕ್, ಕುವೈತ್, ಕತಾರ್ ಮತ್ತು ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ನೆಲೆಗಳು ಮಾತ್ರ ನಮ್ಮ ಟಾರ್ಗೆಟ್ ಎಂದು ಇರಾನ್ ಹೇಳಿದೆ. ಯುಎಇ ಇರಾನ್‌ನ 165 ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು, 152 ಕ್ಷಿಪಣಿಗಳನ್ನು ನಾಶ ಪಡಿಸಿದೆ ಮತ್ತು ಎರಡು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬಹ್ರೇನ್‌ನ ರಾಜಧಾನಿ ಮನಾಮದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ಮೇಲೆ ಇರಾನ್‌ನಿಂದ ನಡೆದ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ. ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಖಮೇನಿ ಸ್ಥಾನಕ್ಕೆ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕವಾಗಿ ನೇಮಕಗೊಳಿಸಲಾಗಿದೆ. ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ಇವರು ಆ ಸ್ಥಾನ ನಿರ್ವಹಿಸಬೇಕಿದೆ.

Related Posts

Leave a Reply

Your email address will not be published. Required fields are marked *