ಬೆಳಗಾವಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಕಿರುಕುಳದಿಂದ ಕುಟುಂಬ ಬೀದಿಗೆ ಬಿದ್ದಿದೆ. ಕಂಪನಿಯು ಮನೆ ಸೀಜ್ ಮಾಡಿದ್ದು, ಮೂರು ತಿಂಗಳ ಮಗು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ.
ಹನುಮಂತ ಪಾಟೀಲ್ ಎಂಬವರು ತಂದೆ ಶ್ರೀಕಾಂತ್ ಪಾಟೀಲ್ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ವರ್ಷ ಶ್ರೀಕಾಂತ್ ನಿಧನರಾದ ಬಳಿ, ಆರೋಗ್ಯ ಸಮಸ್ಯೆಯಿಂದಾಗಿ ಹನುಮಂತ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಏಳು ಲಕ್ಷ ರೂ. ಬಾಕಿ ಇದ್ದ ಹಿನ್ನೆಲೆಯಲ್ಲಿ ಏಕಾಏಕಿ ಬಂದ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾಗಿ ಕುಟುಂಬ ಆರೋಪಿಸಿದೆ.
ಹನುಮಂತ ದಂಪತಿಗೆ ಮೂರು ತಿಂಗಳ ಮಗುವಿದೆ, ಬಾಣಂತಿ-ಮಗು ಸೇರಿ ಐವರು ಕುಟುಂಬಸ್ಥರು ರಾತ್ರಿಯಿಡೀ ಬೀದಿಯಲ್ಲಿ ಕಾಲ ಕಳೆದಿದ್ದಾರೆ. ಐದು ತಿಂಗಳ ಬಾಣಂತಿ ಮತ್ತು ಮಗು ರಾತ್ರಿ ಊಟವಿಲ್ಲದೆ, ಚಳಿಯಿಂದ ಬಳಲಿದ ಕಾರಣ ಮಗುವಿಗೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹನುಮಂತ ಪಾಟೀಲರ ಪತ್ನಿ ಶ್ರೀದೇವಿ ತಿಳಿಸಿದ್ದಾರೆ.
ಬಟ್ಟೆ, ಹಾಸಿಗೆ, ಪಾತ್ರೆ ಸೇರಿ ಮನೆಯೊಳಗಿನ ಯಾವ ವಸ್ತುವನ್ನೂ ತೆಗೆದುಕೊಳ್ಳಲು ಬಿಡದ ಸಿಬ್ಬಂದಿ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಹೆಂಗಸರು, ಮಕ್ಕಳು ಮಾತ್ರವಿದ್ದು, ಕೋರ್ಟ್ ನೋಟಿಸ್ ತೋರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ವರ್ಷದಿಂದ ಸಾಲದ ಕಂತು ತುಂಬುತ್ತಾ ಬಂದಿದ್ದೇನೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿದ್ದ ಕಾರಣ ಹಣ ತುಂಬಿರಲಿಲ್ಲ ಎಂದು ಹನುಮಂತ ತಿಳಿಸಿದ್ದಾರೆ.


