Menu

ಕಮಿಶನ್‌ ಆಸೆಗಾಗಿ ಕ್ರೀಡಾಂಗಣ, ಕೆಎಸ್‌ಐಸಿ ಮುಚ್ಚಿಹಾಕುತ್ತಿರುವ ಕಾಂಗ್ರೆಸ್‌ ಸರ್ಕಾರ: ಆರ್‌ ಅಶೋಕ

ಕಮಿಶನ್‌ ಆಸೆಗಾಗಿ ಹಾಗೂ ಕೆಎಸ್‌ಐಸಿ ಮುಚ್ಚಿಹಾಕಲು ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಈ ಯೋಜನೆ ಕೈ ಬಿಡದೇ ಇದ್ದರೆ ಬಿಜೆಪಿಯಿಂದ ʼಸೇವ್‌ ಮೈಸೂರು ಸಿಲ್ಕ್‌ʼ ಎಂಬ ಹೆಸರಿನ ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವ್‌ ಮೈಸೂರು ಸಿಲ್ಕ್‌ ಅಭಿಯಾನಕ್ಕಾಗಿ ನಾನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ (KSIC) ಭೇಟಿ ನೀಡಿದ್ದೇನೆ. ಈ ಸಂಸ್ಥೆಯ ರೇಷ್ಮೆಗೆ ಜಿಐ ಟ್ಯಾಗ್‌ ದೊರೆತಿದ್ದು, ಮೈಸೂರು, ಚಾಮರಾಜನಗರ ಭಾಗದಲ್ಲಿ ಪ್ರತಿಷ್ಠೆಯ ವಿಚಾರವಾಗಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಇಂಗ್ಲೆಂಡ್‌ಗೆ ಹೋಗಿ ಅಲ್ಲಿ ರೇಷ್ಮೆ ಸೀರೆಗಳನ್ನು ನೋಡಿ, ಸ್ವಿಜರ್‌ಲ್ಯಾಂಡ್‌ನಿಂದ ಯಂತ್ರಗಳನ್ನು ತರಿಸಿ ಇಲ್ಲಿ ಉದ್ಯಮ ಆರಂಭಿಸಿದ್ದರು. ಇಲ್ಲಿನ ರೇಷ್ಮೆ ರೈತರಿಗೆ ಲಾಭವಾಗಲು ಈ ಉದ್ಯಮ ಸ್ಥಾಪಿಸಿದ್ದರು ಎಂದರು.

ಚನ್ನಪಟ್ಟಣದ ಕೇಂದ್ರ ಕಾರ್ಖಾನೆಯಲ್ಲಿ  400 ಕಾರ್ಮಿಕರಿದ್ದಾರೆ. ಟಿ.ನರಸೀಪುರದ ನೂಲು ತೆಗೆಯುವ ಕಾರ್ಖಾನೆ 13 ಎಕರೆ ಜಾಗದಲ್ಲಿದ್ದು, 6 ಎಕರೆಯನ್ನು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ಒಂದು ತಿಂಗಳಿಗೆ 1,400 ಸೀರೆ ತಯಾರಾಗುತ್ತಿದ್ದು,  ಒಂದೇ ದಿನದಲ್ಲಿ ಮಾರಾಟವಾಗುತ್ತದೆ. ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಇದೇ ಸೀರೆಯನ್ನು ಉಡಿಸಲಾಗುತ್ತದೆ. ಈ ಸೀರೆಗೆ ಪವಿತ್ರತೆ ಹಾಗೂ ಪರಂಪರೆ ಇದೆ ಎಂದರು.

ಈ ವರ್ಷ ಕೆಎಸ್‌ಐಸಿ ನಿಗಮಕ್ಕೆ 96 ಕೋಟಿ ರೂ. ಲಾಭ ಬಂದಿದೆ. ಇದನ್ನು ನಿಗಮದ ಸುಧಾರಣೆಗೆ ಬಳಸದೆ ಬೆಸ್ಕಾಂಗೆ ನೀಡಲಾಗಿದೆ. ನಿಗಮ ಅಭಿವೃದ್ಧಿ ಮಾಡಲು ಅಧಿಕಾರಿಗಳು ಫಾರಿನ್‌ ಟ್ರಿಪ್‌ ಮಾಡಿ 1.40 ಕೋಟಿ ರೂ. ಖರ್ಚು ಮಾಡಿದ್ದಾರೆ. ಬೇಡಿಕೆಗೆ ಹತ್ತು ಪಟ್ಟು ಅಧಿಕ ಮಾರುಕಟ್ಟೆ ಇದೆ.  2,000 ಜನರಿಗೆ ಕೆಲಸವಿದೆ. ಬಹಳ ಲಾಭದಲ್ಲಿರುವ ಸಂಸ್ಥೆಯಾಗಿದೆ. ಇದೇ ಜಾಗದಲ್ಲಿ ಕ್ರೀಡಾಂಗಣ ಮಾಡಬೇಕೆಂದೇನೂ ಇಲ್ಲ. ಕಾರ್ಖಾನೆಯಲ್ಲಿ ಬಾಯ್ಲರ್‌ಗಳಿದ್ದು, ಹೆಚ್ಚು ತಾಪಮಾನ ಹಾಗೂ ದುರ್ವಾಸನೆ ಬರುತ್ತದೆ. ಅದಕ್ಕಾಗಿ ಕಾರ್ಖಾನೆಯ ಆವರಣದಲ್ಲಿ ಮರಗಳನ್ನು ಬೆಳೆಸಿದ್ದು, ಇದರಿಂದ ತಾಪಮಾನ ಇಳಿಕೆಯಾಗಿ ಪರಿಸರ ಸಮತೋಲನವಾಗುತ್ತದೆ. ಕ್ರೀಡಾಂಗಣ ನಿರ್ಮಿಸಿದರೆ 430 ಮರಗಳನ್ನು ಕಡಿದುಹಾಕಬೇಕಾಗುತ್ತದೆ. ಕ್ರೀಡಾಂಗಣ ನಿರ್ಮಾಣವಾದರೂ ಪಕ್ಕದಲ್ಲೇ ಬಾಯ್ಲರ್‌ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಚಟುವಟಿಕೆ ನಡೆಸಲು ಅನುಮತಿ ಸಿಗುವುದಿಲ್ಲ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಹೊರುತ್ತಾರೆ, ಈ ಭಾಗದಲ್ಲಿ ಶುದ್ಧ ನೀರು ಸಿಗುವುದರಿಂದ ಸೀರೆಯ ಗುಣಮಟ್ಟ ಹೆಚ್ಚಿದೆ. ಇಂತಹ ಸ್ಥಳದಲ್ಲೇ ಕ್ರೀಡಾಂಗಣ ಮಾಡಲು ನಿರ್ಧರಿಸಿದ್ದಾರೆ ಎಂದರು.

ಕಾಂಗ್ರೆಸ್‌ ಕಡೆಯವರು 12 ಕೋಟಿ ರೂ. ಗೆ ಗುತ್ತಿಗೆ ಪಡೆದಿದ್ದು, ಅವರು ಯೋಜನೆ ಜಾರಿಗೆ ಒತ್ತಡ ಹಾಕುತ್ತಿದ್ದಾರೆ. ಒಂದು ಕ್ರೀಡಾಂಗಣದಲ್ಲಿ ಕನಿಷ್ಠ 12 ಎಕರೆ ಜಾಗ ಬೇಕಾಗುತ್ತದೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ನೂಲು ತೆಗೆಯುವ ಮಿಲ್‌ ಸಮೀಪದಲ್ಲಿದೆ. ಕೆಎಸ್‌ಐಸಿ ಮುಚ್ಚಿಹಾಕಿದರೆ ಇವರ ಖಾಸಗಿ ಕಾರ್ಖಾನೆಗೆ ಬೇಡಿಕೆ ಬರುತ್ತದೆ. ಈ ದುರುದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ. ಇಲ್ಲಿ ಕಲ್ಲಿದ್ದಲಿನಿಂದ ಟನ್‌ಗಟ್ಟಲೆ ಬೂದಿ ಬರುತ್ತದೆ. ಕ್ರೀಡಾಂಗಣ ಬಂದರೆ ಇದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಇಂತಹ ಯೋಜನೆ ಸುರಕ್ಷಿತವೂ ಅಲ್ಲ ಎಂದು ಹೇಳಿದರು.

ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಮಾಡದೆ ವಿದ್ಯಾರ್ಥಿಗಳನ್ನು ಆಟವಾಡಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ನಮ್ಮ ಹೋರಾಟ ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ನೇಮಕಾತಿ ಆದೇಶ ಮಾಡಿದೆ. 2.84 ಲಕ್ಷ ಹುದ್ದೆಗಳಿಗೆ ನಾವು ಹೋರಾಟ ಮಾಡಿದ್ದರೂ, ಸರ್ಕಾರ 56 ಸಾವಿರ ಹುದ್ದೆಗೆ ನೇಮಕ ಆದೇಶ ಮಾಡಿದೆ. ಉಳಿದ ನೇಮಕಾತಿಗೆ ಯಾವಾಗ ಆದೇಶ ಮಾಡುತ್ತಾರೆ ಎಂದು ಸರ್ಕಾರ ತಿಳಿಸಬೇಕು. ಇಲ್ಲವಾದರೆ ಪಾದಯಾತ್ರೆಯ ಚಳವಳಿ ಮಾಡುತ್ತೇವೆ. ಅದೇ ರೀತಿ ʼಸೇವ್‌ ಮೈಸೂರು ಸಿಲ್ಕ್‌ʼ ಎಂಬ ಹೋರಾಟ ಮಾಡುತ್ತೇವೆ. ಇದನ್ನು ದೊಡ್ಡ ಮಟ್ಟದ ಜನಾಂದೋಲನವಾಗಿ ರೂಪಿಸುತ್ತೇವೆ. ಬಜೆಟ್‌ ಅಧಿವೇಶನದಲ್ಲೂ ಈ ಬಗ್ಗೆ ಮಾತಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕ್ರಿಕೆಟ್‌ ಕ್ರೀಡಾಂಗಣ ಆರಂಭಿಸಲು ಜಾಗ ಸಿಗುತ್ತದೆ. ಎಲ್ಲ ತಾಲೂಕುಗಳಲ್ಲಿ ಕಾಂಗ್ರೆಸ್‌ ಕಚೇರಿಗಳನ್ನು ನಿರ್ಮಿಸಲು ಖರಾಬು ಜಮೀನುಗಳನ್ನು ಗುರುತಿಸಿದ್ದಾರೆ. ಆದರೆ ಕ್ರೀಡಾಂಗಣ ಮಾಡಲು ಜಾಗ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.

ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಯಾರೂ ಸರಿಯಾಗಿ ಹೇಳುತ್ತಿಲ್ಲ. ಇದೇ ಕಚ್ಚಾಟದಿಂದಾಗಿ ಅಭಿವೃದ್ಧಿ ಕಡೆಗಣನೆಯಾಗಿದೆ. ಇಂತಹ ಕಾಮಿಡಿಯನ್ನು ಜನರು ಎಂಜಾಯ್‌ ಮಾಡುತ್ತಿದ್ದಾರೆ. ನವೆಂಬರ್‌ ಕ್ರಾಂತಿ ಆರಂಭವಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಕಹಳೆ ಊದಲಾಗಿದೆ. ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರೇ ಮುಂದೆ ಕಾಂಗ್ರೆಸ್‌ ಗೆಲ್ಲಲ್ಲ ಎಂದಿದ್ದಾರೆ. ಗ್ಯಾರಂಟಿಗಳನ್ನು ಹೊರೆ ಎಂದು ಈಗ ಡಿಕೆಶಿವಕುಮಾರ್‌ ಹೇಳಿದ್ದಾರೆ. ಚುನಾವಣೆಯಲ್ಲಿ ಘೋಷಣೆ ಮಾಡುವಾಗ ಇವರಿಗೆ ಜ್ಞಾನ ಇರಲಿಲ್ಲ. ಯುವನಿಧಿ ಈಗಾಗಲೇ ಸ್ಥಗಿತವಾಗಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ ಎಂದು ಟೀಕಿಸಿದರು.

Related Posts

Leave a Reply

Your email address will not be published. Required fields are marked *