Menu

GAFX ಕ್ಷೇತ್ರವು ಕೇವಲ ಆರ್ಥಿಕ ಅವಕಾಶವಲ್ಲ, ಒಂದು ನಾಗರಿಕತೆಗೆ ನೀಡಿರುವ ಅವಕಾಶ: ಸಿಎಂ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರು ಜಿಎಎಫ್ ಎಕ್ಸ್-2026ರ 7ನೇ ಆವೃತ್ತಿ ಉದ್ಘಾಟಿಸಿ, GAFX ಕ್ಷೇತ್ರವು ಕೇವಲ ಆರ್ಥಿಕ ಅವಕಾಶವಲ್ಲ; ಇದು ಒಂದು ನಾಗರಿಕತೆಗೆ ನೀಡಿರುವ ಅವಕಾಶ. ಇದು ಯುವಜನರಿಗೆ ತಮ್ಮ ಕಲ್ಪನಾಶಕ್ತಿಯನ್ನು ಜೀವನೋಪಾಯವಾಗಿ ಪರಿವರ್ತಿಸಲು , ಕಥೆಗಾರರಿಗೆ ತಮ್ಮ ಕಥಾನಿರೂಪಣೆಗೆ ಡಿಜಿಟಲ್ ರೂಪ ನೀಡಲು ಅವಕಾಶ ನೀಡುತ್ತದೆ ಎಂದರು.

“ಎವೊಲ್ಯೂಶನ್ ರಿಲೋಡೆಡ್” ಎಂಬ ವಿಷಯವನ್ನೊಳಗೊಂಡ ಬೆಂಗಳೂರು GAFX – ಗೇಮ್ಸ್, ಅನಿಮೇಶನ್ ಮತ್ತು ವಿಸುವಲ್ ಎಫೆಕ್ಟ್ಸ್ ಸಮ್ಮೇಳನದ 7ನೇ ಆವೃತ್ತಿಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದಾಗಿ ಹೇಳಿದರು.

AVGC-XR ಕ್ಷೇತ್ರದ ಮೇಲಿನ ಕರ್ನಾಟಕದ ಬದ್ಧತೆ ಇತ್ತೀಚಿನದಲ್ಲ. ನಾವು ಈ ಕ್ಷೇತ್ರದಲ್ಲಿ ಮೊದಲಿಗರು. . 2017ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ AVGC ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಕೋಡ್’ ರಚನೆಯಷ್ಟೇ ಕಂಟೆಂಟ್ ರಚನೆಯೂ ಶಕ್ತಿಯುತವಾಗಲಿದೆ ಎಂಬ ದೂರದೃಷ್ಠಿಯಿಂದ ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಿಎಂ ಹೇಳಿದರು.

ಈ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲು ಬೆಂಗಳೂರು ಅತ್ಯಂತ ಸೂಕ್ತ. ಸೃಜನಶೀಲತೆಯಿಂದ ಬಂಡವಾಳವರಗೆ ,ಸಾಫ್ಟ್ವೇರ್ನಿಂದ ಬಾಹ್ಯಾಕಾಶ ಸಂಶೋಧನೆವರೆಗೆ, ಬಯೋಟೆಕ್ನಿಂದ ಡೀಪ್-ಟೆಕ್ವರೆಗೆ, ಪ್ರತಿಯೊಂದು ಕ್ರಾಂತಿಯಲ್ಲಿಯೂ ಬೆಂಗಳೂರು  ಮುಂಚೂಣಿಯಲ್ಲಿದೆ.  GAFX ಮುಂದಿನ ಮಹತ್ವದ ಕ್ಷೇತ್ರವಾಗಿದ್ದು, ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಕ್ಷೇತ್ರವು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಾಗಿ ಉಳಿದಿಲ್ಲ. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ, ಇಂದು ಮಾನವನ ಕಥೆ, ಸಂಸ್ಕೃತಿ, ಶೀಕ್ಷಣ ಮತ್ತು ಆಡಳಿತದ ಅನುಭವಗಳನ್ನು GAFX ರೂಪಿಸುತ್ತಿದೆ ಎಂದರು.

ನಾವು ಪ್ರಸ್ತುತ 2024–2029 ಅವಧಿಗೆ ಸಂಬಂಧಿಸಿದ ಮೂರನೇ AVGC-XR ನೀತಿಯನ್ನು ಜಾರಿಗೆ ತರುತ್ತಿದ್ದು. ಇದು ಆಡಳಿತದಲ್ಲಿ ನಿರಂತರತೆ ಮಾತ್ರವಲ್ಲದೇ ಈ ವಲಯವನ್ನು ಬಲಪಡಿಸುವಲ್ಲಿ ನಮಗಿರುವ ದೃಢಸಂಕಲ್ಪವನ್ನು ಬಿಂಬಿಸುತ್ತದೆ. ನಮ್ಮ AVGC-XR ನೀತಿಯು, ಈ ಎಕೋಸಿಸ್ಟಂ ನು ಬಲಪಡಿಸಲು ಪ್ರೋತ್ಸಾಹಕಗಳು, ಮೂಲಸೌಕರ್ಯಗಳ ಬೆಂಬಲ, ಕೌಶಲ್ಯ ಅಭಿವೃದ್ಧಿ, ಇನ್ಕ್ಯೂಬೇಶನ್ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸಹಯೋಗವನ್ನೂ ಒದಗಿಸಿದೆ. 9. K-Tech, ಸ್ಟಾರ್ಟ್ಅಪ್ ಕರ್ನಾಟಕ, ಶ್ರೇಷ್ಠತಾ ಕೇಂದ್ರಗಳು (Centres of Excellence) ಹಾಗೂ ಉದ್ಯಮಗಳ ಸಹಭಾಗಿತ್ವದೊಂದಿಗೆ, ನಾವು ಕೇವಲ ನೀತಿಗಳನ್ನಷ್ಟೇ ಅಲ್ಲ, ಬೆಳವಣಿಗೆಗೂ ವೇದಿಕೆಯನ್ನು ನಿರ್ಮಿಸಿದ್ದೇವೆ ಎಂದು ವಿವರಿಸಿದರು.

ಬೆಂಗಳೂರನ್ನು ಮಾತ್ರ ಕೇಂದ್ರೀಕರಿಸದೇ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ ಹಾಗೂ ಇತರ ಪ್ರಮುಖ ನಗರಗಳಲ್ಲಿ ಡಿಜಿಟಲ್ ಕ್ರಿಯೇಟಿವ್ ಕ್ಲಸ್ಟರ್ಗಳನ್ನು ಸೃಜಿಸಲಾಗುತ್ತಿದೆ. ನಮ್ಮ ಮುಂದಿನ ಶ್ರೇಷ್ಠ ಗೇಮ್ ಡಿಸೈನರ್ ಅಥವಾ VFX ಇನೋವೇಟರ್ಗಳು, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದಲೂ ಹೊರಹೊಮ್ಮಬೇಕೆಂಬುದು  ಆಶಯ. AVGC-XR ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಸಂಯೋಜಿಸಲು ಹಾಗೂ ವೈದ್ಯಕೀಯ ತರಬೇತಿಯಲ್ಲಿ ಬಳಸಲು ಮತ್ತು ಭವಿಷ್ಯದ ಪೀಳಿಗೆಗೆ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಕ್ರಮ ಕೈಗೊಂಡಿದ್ದೇವೆ.  ಬೆಳವಣಿಗೆಯು ಭೌಗೋಳಿಕವಾಗಿ, ಸಾಮಾಜಿಕವಾಗಿ ಒಳಗೊಳ್ಳುವಂತಿದ್ದು, ಜನರನ್ನು ಸಶಕ್ತರನ್ನಾಗಿಸಿ, ಅವರ ಚಿಂತನೆಗಳಿಗೆ ಬಲ ತುಂಬುವುದು ನಮ್ಮ ನಂಬಿಕೆಯಾಗಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

GAFX ಕ್ಷೇತ್ರವು ಕೇವಲ ಆರ್ಥಿಕ ಅವಕಾಶವಲ್ಲ; ಇದು ಒಂದು ನಾಗರಿಕತೆಗೆ ನೀಡಿರುವ ಅವಕಾಶ. ಇದು ಯುವಜನರಿಗೆ ತಮ್ಮ ಕಲ್ಪನಾಶಕ್ತಿಯನ್ನು ಜೀವನೋಪಾಯವಾಗಿ ಪರಿವರ್ತಿಸಲು , ಕಥೆಗಾರರಿಗೆ ತಮ್ಮ ಕಥಾನಿರೂಪಣೆಗೆ ಡಿಜಿಟಲ್ ರೂಪ ನೀಡಲು ಅವಕಾಶ ನೀಡುತ್ತದೆ. ಸಣ್ಣ ಪಟ್ಟಣದಲ್ಲಿ ಕುಳಿತ ಗ್ರಾಮೀಣ ಪ್ರತಿಭೆಯೊಬ್ಬ, ಕೇವಲ ತನ್ನ ಲ್ಯಾಪ್ಟಾಪ್ ಮತ್ತು ಅಂತರ್ಜಾಲದಿಂದ ಜಾಗತಿಕ ಮಟ್ಟದ ಕಂಟೆಂಟ್ ಸೃಜಿಸಲು ಅವಕಾಶ ನೀಡುತ್ತದೆ.  ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರ 20 ಲಕ್ಷ ಉದ್ಯೋಗಗಳನ್ನು ಕೊಡುತ್ತದೆ. ವಿನ್ಯಾಸ, ಕೋಡಿಂಗ್, ಕಥೆ ಹೇಳುವುದು, ಸಂಗೀತ, ಮೋಷನ್ ಕ್ಯಾಪ್ಚರ್, AI ಮಾಡೆಲಿಂಗ್, ನಿರ್ವಹಣೆ ಹೀಗೆ ಎಲ್ಲ ಕಡೆ ಅವಕಾಶಗಳಿವೆ. ಇಲ್ಲಿ ಕಲೆ, ಗಣಿತ, ಮನೋವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವೂ ಒಂದಾಗುತ್ತವೆ ಎಂದರು.

ಇವತ್ತು AI (ಕೃತಕ ಬುದ್ಧಿಮತ್ತೆ) ಬಗ್ಗೆ ಮಾತಾಡದೆ ಯಾವ ಚರ್ಚೆಯೂ ಮುಗಿಯೋದಿಲ್ಲ. AI ಕಥೆ, ಸಿನಿಮಾ, ಗೇಮ್ ಎಲ್ಲವನ್ನೂ ಬದಲಾಯಿಸುತ್ತಿದೆ. ಅನಿಮೇಷನ್ನಿಂದ ಹಿಡಿದು ಧ್ವನಿ ನಿರ್ಮಾಣದವರೆಗೆ, AI ಕೆಲಸವನ್ನು ಸುಲಭ ಮಾಡುತ್ತದೆ, ವೆಚ್ಚವನ್ನು ಕಡಿಮೆ ಮಾಡುತ್ತದೆ. AI ಕೇವಲ ಒಂದು ಸಾಧನ. ಅದು ಮನುಷ್ಯನ ಕಲ್ಪನೆಗೆ ಬದಲಾಗಲು ಸಾಧ್ಯವಿಲ್ಲ. ತಂತ್ರಜ್ಞಾನ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸಬೇಕೇ ಹೊರತು ಅದನ್ನು ಅಳಿಸಿಹಾಕಬಾರದು. ಒಳ್ಳೆಯ ಕಥೆ ಹೇಳುವ ಹಿಂದೆ ಇರುವುದು ಮನುಷ್ಯನ ಭಾವನೆಗಳು. ಯಾವ ಕ್ರಮವಿಧಿಯೂ (algorithm) ಅದನ್ನು ಸಂಪೂರ್ಣವಾಗಿ ಅನುಕರಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.

AI ಅನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬೌದ್ಧಿಕ ಆಸ್ತಿಯ ಹಕ್ಕುಗಳು, ದತ್ತಾಂಶದ ಗೌಪ್ಯತೆ, ಕೆಲಸಕ್ಕೆ ನ್ಯಾಯವಾದ ಸಂಭಾವನೆ, ಹೊಸ ಕೌಶಲ್ಯ ಕಲಿಯಲು ಅವಕಾಶ – ಇವುಗಳ ಬಗ್ಗೆ ನಾವು ಯಾವಾಗಲೂ ಗಮನವಾಗಿರಬೇಕು.  ಪ್ರಗತಿ ಎಲ್ಲರನ್ನೂ ತಲುಪಬೇಕು. ಡಿಜಿಟಲ್ ಕ್ರಾಂತಿಯು ಶ್ರೀಮಂತ-ಬಡ ಅಂತರವನ್ನು ಹೆಚ್ಚಿಸಬಾರದು; ಬದಲಾಗಿ, ಅವಕಾಶಗಳನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂದರು.

Related Posts

Leave a Reply

Your email address will not be published. Required fields are marked *