ಹಾಸನದಲ್ಲಿ ಸಂಬಳವಿಲ್ಲದೆ ಜೀತದಾಳುಗಳಾಗಿ ದುಡಿಯುತ್ತ ಶೆಡ್‌ನಲ್ಲಿ ಅಕ್ರಮವಾಗಿ ಬಂಧಿತರಾಗಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗ ಈರಣ್ಣನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮವೊಂದಕ್ಕೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದ್ದು, ಸಂಬಂಧಿಸಿದ ಅಧಿಕಾರಿ ಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತಂದು ಬೇಲೂರು ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಕೂಡಿ ಹಾಕಿ ಸಂಬಳ ನೀಡದೆ ಅಕ್ರಮವಾಗಿ ದುಡಿಸಿಕೊಳ್ಳಲಾಗುತ್ತಿತ್ತು. ನಾಗರಾಜ್ ಮತ್ತು ಮೋಹನೇಶ್ ಎಂಬವರು ಕಾರ್ಮಿಕರನ್ನು ಮೂಲಸೌಕರ್ಯಗಳಿಲ್ಲದ ಒಂದೇ ಶೆಡ್‌ನಲ್ಲಿ ಬಂಧಿಸಿ ದಬ್ಬಾಳಿಕೆ ನಡೆಸುತ್ತಿದ್ದರು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಸಿ ರಾತ್ರಿ ಮತ್ತೆ ಶೆಡ್‌ಗೆ ಕರೆತಂದು ಇರಿಸಲಾಗುತ್ತಿತ್ತು. ಹೊರಗಿನವರ ಸಂಪರ್ಕ ಸಿಗದಂತೆ ನಿಗಾ ವಹಿಸಿದ್ದರು ಎಂದು ತಿಳಿದುಬಂದಿದೆ.
ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜೀತದಲ್ಲಿದ್ದ 18 ಮಂದಿಯನ್ನು ರಕ್ಷಿಸಿದ್ದಾರೆ. ಆರೋಪಿಗಳು ರೈಲ್ವೆ ನಿಲ್ದಾಣ ಗಳಲ್ಲಿ ಆಶ್ರಯವಿಲ್ಲದೆ ಇದ್ದ ಜನರನ್ನು ಕೆಲಸ ನೀಡುವ ನೆಪದಲ್ಲಿ ಕರೆತಂದು ಹಣ ನೀಡದೆ ದುಡಿಸಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ.
ಜೀತದಾಳುಗಳಾಗಿದ್ದ ಈ ಕಾರ್ಮಿಕರು ಕೇರಳ, ಒರಿಸ್ಸಾ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಹೊರರಾಜ್ಯಗಳವರು. ಜೊತೆಗೆ ಹಾವೇರಿ, ವಿಜಯಪುರ, ಗದಗ, ಕಾಸರಗೋಡುಗಳವರೂ ಸೇರಿದ್ದಾರೆ. ಇವರ ದುಡಿಮೆ ಹಣವನ್ನು ನಾಗರಾಜ್ ಮತ್ತು ಮೋಹನೇಶ್ ಪಡೆದುಕೊಳ್ಳುತ್ತಿದ್ದರು.
ಈ ಕಾರ್ಮಿಕರಲ್ಲಿ ವಿಜಯಪುರ ಮೂಲದ ರಜತ್ ಎಂಬಾತ ತಪ್ಪಿಸಿಕೊಂಡು ಹೋಗಿ, ಈರಣ್ಣನನ್ನು ಬೇಲೂರಿನಲ್ಲಿ ಜೀತವಿರಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕುಟುಂಬಕ್ಕೆ ನೀಡಿದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಜೀತಪದ್ದತಿ ನಿಷೇಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲಾದ 18 ಕಾರ್ಮಿಕರಿಗೆ ಪುನರ್ವಸತಿ, ಆಹಾರ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವುದಾಗಿ ಹೇಳಿದೆ.


