ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಮತ್ತು ಹಾಸನ ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಒಂದೇ ಕಾರಲ್ಲಿ ಓಡಾಡುತ್ತಿರುವ ದೃಶ್ಯದ ವೀಡಿಯೊ ವೈರಲ್ ಆಗಿದ್ದು, ರಾಜಕೀಯ ಸಂಚಲನ ಸೃಷ್ಟಿಸಿದೆ.
ಪ್ರೀತಂಗೌಡ ಕಾಂಗ್ರೆಸ್ ಸಖ್ಯ ಬೆಳೆಸಿದ್ದಾರೆಯೇ ಎಂಬ ಚರ್ಚೆ ಕಾವೇರಿದೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಲಲಿತ ಮಹಲ್ ಹೋಟೆಲ್‌ಗೆ ಭೇಟಿ ನೀಡಿದ್ದ ಪ್ರೀತಂಗೌಡ, ಶಾಸಕ ಹರೀಶ್‌ಗೌಡ ಅವರ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಯಲ್ಲೇ ಹಾಸನ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್ ಇದ್ದರೆಂಬುದು ವಿಶೇಷ.
ಶಾಸಕ ಹರೀಶ್‌ಗೌಡ ಒಕ್ಕಲಿಗ ಸಮುದಾಯದ ನಾಯಕ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ. ಅವರೊಂದಿಗೆ ಪ್ರೀತಂಗೌಡ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೀತಂಗೌಡ, ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ನಾಯಕರಲ್ಲಿ ಪ್ರಮುಖರು. ಜೆಡಿಎಸ್ ವಿರುದ್ಧ ಹೋರಾಟದ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ಪ್ರೀತಂಗೌಡ, ಇದೀಗ ಜೆಡಿಎಸ್ ಜತೆಯಲ್ಲೇ ಹೊಂದಾಣಿಕೆಯ ರಾಜಕಾರಣ ಮಾಡಬೇಕಿದೆ. ಈ ಸಂದಿಗ್ಧತೆಯಿಂದ ಪಾರಾಗಲು ಕಾಂಗ್ರೆಸ್ ಸೇರುವ ನಿಟ್ಟಿನಲ್ಲೂ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬೇಲೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಪ್ರೀತಂಗೌಡ ಕಾಂಗ್ರೆಸ್‌ಗೆ ಒಂದು ಕಾಲು ಇಟ್ಟಿದ್ದಾರೆ ಎಂದು ಹೇಳಿದ್ದರು. ರಾಜ್ಯಮಟ್ಟದಲ್ಲಿ ಬಿಜೆಪಿಯ ಪದಾಧಿಕಾರಿಯಾಗಿ ದ್ದರೂ ಪಕ್ಷದ ಆಂತರಿಕ ವಲಯದಲ್ಲಿ ಪ್ರೀತಂಗೌಡ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಮನ್ನಣೆ ಸಿಗುತ್ತಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ತನ್ನ ನೆಲೆಯನ್ನು ಹಾಸನದಲ್ಲಿ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕಾಗಿ ಪ್ರಭಾವಿ ನಾಯಕರಿಗೆ ಗಾಳ ಹಾಕುತ್ತಿದ್ದು, ಪ್ರೀತಂಗೌಡ ಸಿಲುಕುವರೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಈ ನಡುವೆ ಕಾಂಗ್ರೆಸ್ ಶಾಸಕರೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿರುವುದು ಪಕ್ಷಾಂತರದ ಸುಳಿವು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.


