Menu

ಬಾಗಲಕೋಟೆ ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ; ಸೂಕ್ತ ತನಿಖೆ, ಕಠಿಣ ಕ್ರಮದ ಎಚ್ಚರಿಕೆಯಿತ್ತ ಸಿಎಂ

CM Siddaramaiah

ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ. ನಾಡಿನ ಜನರಿಗೆ ಭಯಮುಕ್ತ ನೆಮ್ಮದಿಯ ಬದುಕು ನೀಡುವುದು ನಮ್ಮ‌  ಆದ್ಯತೆ. ಜನರ ಶಾಂತಿ – ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ – ಶಕ್ತಿಗಳನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.

ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರವೆಂದ ಆರ್‌. ಅಶೋಕ

ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ನಿಷೇಧ ಹೇರಲಾಗಿದೆಯೇ ಎನ್ನುವ ಅನುಮಾನ ರಾಜ್ಯದ ಜನತೆಯನ್ನು ಕಾಡುತ್ತಿದೆ. ಗಣೇಶ ಮೆರವಣಿಗೆಗೂ ಕಲ್ಲು ತೂರಾಟ, ಹನುಮ ಮಾಲಾಧಾರಿಗಳ ಮೇಲೂ ಕಲ್ಲುತೂರಾಟ, ನವರಾತ್ರಿ ಮೆರವಣಿಗೆಗೂ ಅಡ್ಡಿ, ಅಯ್ಯಪ್ಪ ಮಾಲಾಧಾರಿಗಳಿಗೂ ಆಕ್ಷೇಪ, ಓಂ ಶಕ್ತಿ ಪೀಠದ ಪಲ್ಲಕ್ಕಿ ಮೆರವಣಿಗೆ ಮೇಲೂ ಕಲ್ಲೆಸೆತ,  ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಯಲ್ಲೂ ಮತಾಂಧ ಪುಂಡರು ಕಲ್ಲೆಸೆದಿದ್ದಾರೆ. ಹಿಂದೂ ವಿರೋಧಿ @siddaramaiah ಸರ್ಕಾರವು ತನ್ನ ಅಧೀನದಲ್ಲಿ ಕಲ್ಲೆಸೆಯುವ ಇಲಾಖೆ ತೆರೆದು ಅದರ ಮೂಲಕ ಮತಾಂಧ ಪುಡಾರಿಗಳಿಗೆ ಗೌರವಧನ ನೀಡುತ್ತಿದೆಯೇ? ಗೃಹ ಸಚಿವ @DrParameshwara ಅವರಿಗೆ ಬಾಗಲಕೋಟೆಯ ಘಟನೆ ಬಗ್ಗೆ ಏನಾದರೂ ಮಾಹಿತಿ ತಲುಪಿದೆಯೋ? ಅಥವಾ ಇನ್ನೂ “ಗೊತ್ತಿಲ್ಲ”ವೋ? ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ.

 

Related Posts

Leave a Reply

Your email address will not be published. Required fields are marked *