ಬೆಂಗಳೂರಿನ ನಿವಾಸಿ, ಸಂಘ, ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ಅನ್ವಯವಾಗುವಂತಹ ಕಸ ವಿಲೇವಾರಿಯ ಬಿಗಿ ಶಾಸನಗಳ ಬಗ್ಗೆಯೂ ಸರ್ಕಾರವಿಂದು ಗಂಭೀರವಾಗಿ ಆಲೋಚಿಸಬೇಕಿದೆ. ಈ ದಿಶೆಯಲ್ಲಿ ದಿಟ್ಟ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಉಸ್ತುವಾರಿಯೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿದ್ದು , ಈ ಸಮಸ್ಯೆಗೆ ತಾರ್ಕಿಕ ಹಾಗೂ ಔಚಿತ್ಯಪೂರ್ಣ ಪರಿಹಾರ ಮಾರ್ಗವನ್ನು ಕಂಡುಹಿಡಿಯಬೇಕಿದೆ.
ಬೃಹದಾಕಾರವಾಗಿ ಬೆಳೆದ ಬೆಂಗಳೂರಿಗೆ ಕಸ ಎಂಬುದು ಬೃಹತ್ ಸವಾಲು..! ಮಹಾನಗರ ಬೆಳವಣಿಗೆ, ಕಸ ಸಂಗ್ರಹ ಮತ್ತು ಅದರ ಇದರ ಸಮರ್ಪಕ ವಿಲೇವಾರಿ, ಈ ಮೂರು ವಿಷಯಗಳ ನಡುವೆ ನಿಕಟ ಸಂಬಂಧವಿದೆ. ದುರ್ದೈವವಶಾತ್ ಪುರಪಾಲಕರು ಇದುವರೆಗೆ ಈ ಮೂರು ವಿಷಯಗಳತ್ತ ರಚನಾತ್ಮಕ ದೃಷ್ಟಿಕೋನವನ್ನು ಹರಿಸದೆ ರಾಜಕೀಯವಾಗಿ ಕೆಸರೆರಚಾಡಿಕೊಳ್ಳು ತ್ತಿರುವುದು ಮಹಾದುರಂತ.
ನಗರಾಭಿವೃದ್ಧಿ ಮತ್ತು ನಗರ ಬೆಳವಣಿಗೆಯ ಜೊತೆ ಜೊತೆಗೆ, ನಿತ್ಯವೂ ಇಲ್ಲಿ ಸಂಗ್ರಹವಾಗುವ ತರಹೆವಾರಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಹೇಗೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು ನಿವಾಸಿ ಮತ್ತು ಪಾಲಿಕೆ( ಜಿಬಿಎ) ಇವರಿಬ್ಬರ ಕರ್ತವ್ಯವೇನು, ಕಸವಿಲೇವಾರಿಗೆ ಅಗತ್ಯವಿರುವ ಪರಿಣಾಮಕಾರಿ ಶಾಸನಗಳೇನು? ಇಂತಹ ಶಾಸನಗಳನ್ನು ರೂಪಿಸಲು ಸರ್ಕಾರ ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳೇನು, ಇಂತಹ ಮೂಲಭೂತ ಸಂಗತಿಯೇ ಇಂದು ರಾಜ್ಯದಲ್ಲಿ ಚರ್ಚೆಯಾಗುತ್ತಿಲ್ಲ.
ಬೆಂಗಳೂರನ್ನು ಕಳೆದ ಮೂವತ್ತು, ನಲವತ್ತು ವರ್ಷಗಳಿಂದಲೂ ಕಸದ ಸಮಸ್ಯೆ ಬಾಧಿಸುತ್ತಿದೆ. ಯಾವಾಗ ಪ್ರಪಂಚದ ಎಲ್ಲ ಮೂಲೆ ಮೂಲೆಯಲ್ಲಿರುವ ತರಹೆವಾರಿ ಪ್ರಜೆಗಳಿಗೆಲ್ಲರಿಗೂ ಬೆಂಗಳೂರು ಹುಲ್ಲುಗಾವಲಾಗಿ ಪರಿಣಮಿಸಿತೋ, ಅಂದಿನಿಂದಲೇ ಈ ಕಸದ ಸಮಸ್ಯೆ ಕೂಡಾ ಜಟಿಲಗೊಂಡು ಹಿಮಾಲಯದೆತ್ತರಕ್ಕೆ ಬೆಳೆಯುವಂತಾಗಿದೆ. ಸೋಜಿಗವೆಂದರೆ ಈ ಸಮಸ್ಯೆ ಹಿಮಾಲಯದೆತ್ತರಕ್ಕೆ ಬೆಳೆದರೂ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂಬುದಕ್ಕೆ ಮಾತ್ರ ಪ್ರಾಕ್ಟಿಕಲ್ ಆಲೋಚನೆ ತಾರ್ಕಿಕ ಅಂತ್ಯ ಕಾಣಿಲ್ಲ.
ಬೆಂಗಳೂರಿನಲ್ಲಿ ಚಂದ್ರಲೋಕಕ್ಕೆ ತೆರಳುವ ಉಪಗ್ರಹ ನಿರ್ಮಾಣವಾಗುತ್ತೆ ! ಚೀನಾ, ಕೊರಿಯಾ, ಅಮೆರಿಕವನ್ನು ನಾಚಿಸುವ ರೋಬೋ ತಯಾರಿಸುವಿಕೆ ಬಗ್ಗೆ ಯಶಸ್ವಿ ಪ್ರಯೋಗವಾಗುತ್ತೆ. ವಿಜ್ಞಾನ, ತಂತ್ರಜ್ಞಾನದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಮೇಧಾಶಕ್ತಿಗೆ ಸವಾಲೆಸೆದು ಅವುಗಳನ್ನು ಮೀರಿಸುವ ಐಐಎಸ್ಸಿ ಐಐಎಂಬಿ ಸಂಸ್ಥೆಗಳು ಬೆಂಗಳೂರಿನಲ್ಲಿದ್ದರೂ ಇಲ್ಲಿನ ಕಸದ ಸಮಸ್ಯೆ ಯ ಬಗ್ಗೆ ಮೇಲಿನ ಸಂಸ್ಥೆಗಳಾಗಲೀ, ವ್ಯಕ್ತಿಗಳಾಗಲೀ ಕಿಂಚತ್ ತಲೆಕೆಡಿಸಿಕೊಂಡಿಲ್ಲ. ಬಾಹ್ಯಾಕಾಶದಲ್ಲಿ ಇ ತ್ಯಾಜ್ಯದ ಬಗ್ಗೆ ಸಂಶೋಧನೆ ನಡೆಸುವ ಬೆಂಗಳೂರಿನ ಟಾಟಾ ಸಂಸ್ಥೆಯ ವಿಜ್ಞಾನಿ ಮನೆ ಪಕ್ಕದಲ್ಲಿ ರಾಶಿ, ರಾಶಿ ಕಸ ಬಿದ್ದಿದ್ದರೂ ಇದರ ವಿಲೇವಾರಿ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಿಲ್ಲ.
ದೀಪದ ಕೆಳಗೆ ಕತ್ತಲು ಎಂದರೆ ಇದೇ, ಇಡೀ ಜಗತ್ತಿನ ಪ್ರಜೆಗಳಿಗೆಲ್ಲರಿಗೂ ಬೆಂಗಳೂರಿಂದು ಬೇಕೇ ಬೇಕು . ಆದರೆ ಈ ನಗರದಲ್ಲಿ ಸಂಗ್ರಹವಾಗುವ ಕಸ ಮತ್ತು ಅದರ ನಿರ್ವಹಣೆ ವಿಷಯ ಮಾತ್ರ ತಮಗೆ ಸಂಬಂಧಿಸಿದ್ದಲ್ಲ ಎಂಬ ಧೋರಣೆ. ಕಸ ವಿಲೇವಾರಿ ವಿಚಾರದಲ್ಲಿ ತಮ್ಮ ಕರ್ತವ್ಯ ಮರೆತರೆ ಕಸದ ಲಾರಿ ಗುತ್ತಿಗೆದಾರರ ಮೇಲೆ ಎಸ್ಮಾ ಜಾರಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಚ್ವರಿಸಿರುವುದೇನೋ ಸರಿ. ಇದೇ ವೇಳೆ ಬೆಂಗಳೂರಿನ ನಿವಾಸಿ, ಸಂಘ, ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ಅನ್ವಯವಾಗುವಂತಹ ಕಸ ವಿಲೇವಾರಿಯ ನೂತನ ಶಾಸನಗಳ ಬಗ್ಗೆಯೂ ಸರ್ಕಾರವಿಂದು ಗಂಭೀರವಾಗಿ ಆಲೋಚಿಸುವುದು ಅನಿವಾರ್ಯ. ಈ ದಿಶೆಯಲ್ಲಿ ದಿಟ್ಟ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಉಸ್ತುವಾರಿಯೂ ಆಗಿರುವ ಡಿಕೆಶಿ ಮುಂದಿದ್ದು , ಈ ಸಮಸ್ಯೆಗೆ ತಾರ್ಕಿಕ ಹಾಗೂ ಔಚಿತ್ಯಪೂರ್ಣ ಪರಿಹಾರ ಮಾರ್ಗವನ್ನು ಕಂಡು ಹಿಡಿಯಬೇಕಿದೆ.


