Wednesday, February 18, 2026
Menu

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸೀಟ್‌ ಬೇಡಿಕೆ: ಬಿಜೆಪಿ ಹೈಕಮಾಂಡ್‌ಗೆ ಸವಾಲು

ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜೆಡಿಎಸ್ ಪಾರ್ಟಿಗೆ ಸಿಂಹಪಾಲಿನ ಸೀಟುಗಳನ್ನು ಕೇಳಿರುವುದು ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಈಗ ಸವಾಲಾಗಿದೆ. ಜಿಬಿಎ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಒಡ್ಡುವ ಷರತ್ತು ಮತ್ತು ಬಿಗಿಸೂತ್ರಗಳಿಗೆ ಕಟ್ಟುಬೀಳುವುದು ಬೇಡ. ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಜೆಡಿಎಸ್ ಪಾರ್ಟಿಯ ಸಂಘಟನೆ ಬಿಜೆಪಿಗಿಂತಲೂ ಬಲಯುತವಾಗಿದೆ ಎಂಬುದು ದಳ ಕಾರ್ಯಕರ್ತರ ಬಿಗಿಪಟ್ಟು.

ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಭವಿಷ್ಯದಲ್ಲಿ ಸುಗಮವೇ – ದುರ್ಗಮವೇ.. ?? ಹೀಗೊಂದು ಪ್ರಶ್ನೆಯೀಗ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಈಗ ದಳಪತಿ ಗಳಿಗೆ ನೇರ ಸವಾಲು ಎಸೆದಿದ್ದಾರೆ. ಕುಮಾರಸ್ವಾಮಿ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎನ್ನುವುದಾದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ೧೧೪ ಸೀಟುಗಳನ್ನು ಗೆದ್ದು ಬರಲಿ ಎಂದಿರುವುದು ದಳ- ಕಮಲ ಮೈತ್ರಿಯನ್ನು ಪ್ರಶ್ನಿಸುವ ರೀತಿಯಲ್ಲಿದೆ.

ನಾರಾಯಣಸ್ವಾಮಿ ಅವರ ಹೇಳಿಕೆಗೆ ಕೇಂದ್ರ ಮಂತ್ರಿಯೂ ಆದ ಜೆಡಿಎಸ್ ಅಗ್ರ ನಾಯಕ ಕುಮಾರಸ್ವಾಮಿ ಖಡಕ್ ಉತ್ತರವನ್ನು ನೀಡಿರುವುದು ಗಮನಾರ್ಹ. ತಮಗೇನೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂಬ ಆತುರವಾಗಲಿ, ಹೆಬ್ಬಯಕೆ ಯಾಗಲಿ ಇಲ್ಲ ಎಂದಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜೆಡಿಎಸ್ ಪಾರ್ಟಿಗೆ ಸಿಂಹಪಾಲಿನ ಸೀಟುಗಳನ್ನು ಕೇಳಿರುವುದು ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಸವಾಲಾಗಿದೆ. ಜಿಬಿಎ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯ ಷರತ್ತು ಮತ್ತು ಬಿಗಿಸೂತ್ರಗಳಿಗೆ ಕಟ್ಟುಬೀಳುವುದು ಬೇಡ. ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ಜೆಡಿಎಸ್ ಪಾರ್ಟಿಯ ಸಂಘಟನೆ ಬಿಜೆಪಿಗಿಂತಲೂ ಬಲಯುತವಾಗಿದೆ. ಹೀಗಿರಬೇಕಾದರೆ ದೇವೇಗೌಡರು ಮತ್ತು ಕುಮಾರಸ್ವಾಮಿ, ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಮೈತ್ರಿ ವಿಚಾರದಲ್ಲಿ ಬೇಷರತ್ ಆಗಿ ಮಣಿಯುವುದು ಬೇಡ. ಇದರಿಂದ ಮುಂದಿನ ದಿನಗಳಲ್ಲಿ ಜೆಡಿಎಸ್ ಮೂಲ ಅಸ್ತಿತ್ವಕ್ಕೇ ಅಪಾಯವಿದೆ ಎಂದು ದಳದ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಾರ್ಯಕರ್ತರು ದಳಪತಿಗಳನ್ನು ಎಚ್ಚರಿಸಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ. ಈ ರಾಜಕೀಯ ಕಟುವಾಸ್ತವವನ್ನು ದೇವೇಗೌಡರಾಗಲೀ ಕುಮಾರಸ್ವಾಮಿ ಅವರಾಗಲಿ ಕಡೆಗಣಿಸುವ ಸ್ಥಿತಿಯಲ್ಲಿಲ್ಲ.

ಇನ್ನೂ ಕೆಲ ಕಟುವಾಸ್ತವಗಳೆಂದರೆ ಬಿಜೆಪಿಯೊಂದಿಗಿನ ಮೈತ್ರಿಯಿಂದ ಪಕ್ಷದ ಉನ್ನತ ಶ್ರೇಣಿಯಲ್ಲಿರುವ ನಾಯಕರಿಗೆ ಅನುಕೂಲವಾಯಿತೇ ವಿನಹ ಇದರಿಂದ ಜೆಡಿಎಸ್ ತಳಮಟ್ಟದ ಕಾರ್ಯಕರ್ತರಿಗೆ ಗುಲಗಂಜಿಯಷ್ಟಾದರೂ ಲಾಭವಾಗಿಲ್ಲ ಎಂಬುದು ಪಕ್ಷದ ತಳಮಟ್ಟದಲ್ಲಿ ವಿಸ್ತೃತ ಚರ್ಚೆಯಾಗುತ್ತಿರುವುದು. ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿಗೆ ರಾಜಕೀಯವಾಗಿ ಪ್ರಬಲ ವಿರೋಧಿ ಜೆಡಿಎಸ್ ವಿನಹ ಬಿಜೆಪಿ ಅಲ್ಲ ಎಂದು ಪಕ್ಷದ ಮಿಡಲ್ ಆರ್ಡರ್‍ಡ್ ನಾಯಕರು ಈಗ ನೇರವಾಗಿಯೇ ಈ ಪ್ರಶ್ನೆ ಎತ್ತಿದ್ದಾರೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ದಿಲ್ಲಿ ಮಟ್ಟದಲ್ಲಿ ನಡೆದ ಈ ಎರಡೂ ಪಕ್ಷಗಳ ಮೈತ್ರಿ ರಾಜ್ಯ ಮಟ್ಟದ ನಾಯಕರಿಗೆ ಸಂಪೂರ್ಣ ಸಹಮತವಿರಲಿಲ್ಲ. ಮೈತ್ರಿಯಿಂದ ಎರಡು ಲೋಕಸಭೆ ಸೀಟು ಗಳಿಸಿಕೊಂಡ ಜೆಡಿಎಸ್ ನಾಯಕರು, ಮೋದಿ ಸರ್ಕಾರದಲ್ಲಿ ಕ್ಯಾಬಿನೇಟ್ ಮಂತ್ರಿ ಸ್ಥಾನವನ್ನು ಪಡೆದರು. ಬಸವರಾಜ ಬೊಮ್ಮಾಯಿ,ಶೆಟ್ಟರ್ ಅಂತವರು ಚುನಾವಣೆಯಲ್ಲಿ ಗೆದ್ದು ಬಂದರೂ ಈ ಇಬ್ಬರು ಮಾಜಿ ಸಿಎಂಗಳಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಜಾಗ ಸಿಗಲಿಲ್ಲ ಎಂಬ ನೋವು ಮತ್ತು ವ್ಯಥೆ ರಾಜ್ಯದ ಕಮಲ ಪಾಳೆಯದಲ್ಲಿ ಕುದಿಯುತಿದ್ದರೂ ಇದನ್ನು ಪಕ್ಷದ ವರಿಷ್ಠರ ಮುಂದೆ ಬಲವಾಗಿ ಪ್ರತಿಪಾದಿಸಲು ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯವಿಲ್ಲ ! ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ದಳ- ಕಮಲ ಮೈತ್ರಿ ಸುಗಮ ವಾಗಿ ಮುಂದುವರಿಯುವ ಲಕ್ಷಣಗಳಂತೂ ಸದ್ಯ ಗೋಚರಿಸುತ್ತಿಲ್ಲ.

Related Posts

Leave a Reply

Your email address will not be published. Required fields are marked *