Menu

ಗುತ್ತಿಗೆದಾರರಿಂದ ಲಂಚ: ಪಿಡಬ್ಲ್ಯುಡಿ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ

ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾಮಗಾರಿ ಬಿಲ್ ಮಂಜೂರು ಮಾಡಲು ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿದ್ದರು. ಆದರೆ ಬಿಲ್ ಬಿಡುಗಡೆ ಮಾಡಲು ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಮಹೇಶ್ ಹಲಗೇರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್ ಛಲವಾದಿ ನೇತೃತ್ವದಲ್ಲಿ ಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಹಾಗೂ ಸಿಬ್ಬಂದಿ ಟ್ರ್ಯಾಪ್ ನಡೆಸಿ, ಲಂಚದ ಹಣ ಸ್ವೀಕರಿಸುವಾಗ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಕಳೆದ ಜನವರಿಯಲ್ಲಿ ಕಲಬುರಗಿಯ ಕಮಲಾಪುರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಶಿಕುಮಾರ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಕಿಶನ್ ರಾಥೋಡ್ ಅವರಿಂದ 20,000 ರೂ.ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಿಶನ್ ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಹಣ ಸ್ವೀಕರಿಸುವಾಗಲೇ ಬಂಧಿಸಿದ್ದರು.

ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಪ್ರಕರಣದಲ್ಲಿ ಬೆದರಿಸಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರೆಂಬ ದೂರಿನ ಅನ್ವಯ ಲೋಕಾಯುಕ್ತ ಕಾರ್ಯಾಚರಣೆ ನಡೆದಿತ್ತು.

Related Posts

Leave a Reply

Your email address will not be published. Required fields are marked *