Thursday, February 05, 2026
Menu

ಬೆಳೆದ ಮೂಲಂಗಿಯನ್ನೇ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾದ ತುಮಕೂರು ರೈತ

ತುಮಕೂರಿನಲ್ಲಿ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಅಲೆದಾಡಿಸುತ್ತಿರುವುದರಿಂದ ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ಘಟನೆ ನಡೆದಿದೆ.

ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು, ಅಧಿಕಾರಿಗಳಿಗೆ ಲಂಚ ನೀಡಲು ನನ್ನಲ್ಲಿ ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ ಎಂದು ಕೂಗಿದ್ದಾರೆ.

ಪ್ರಸನ್ನಕುಮಾರ್ ತನಗಿರುವ ಜಮೀನಿನಲ್ಲಿ ತರಕಾರಿ, ಇತರ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆಗಾಗಿ ಎರಡು ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ. ಮನವಿಗೆ ಕಿವಿಗೊಡದ ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತು ಲೋಕಾಯುಕ್ತ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ರೈತನಿಗೆ ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಲೋಕಾಯುಕ್ತ ಸೂಚಿಸಿತ್ತು.

ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ತಹಶೀಲ್ದಾರ್ ಬಳಿ ಮನವಿ ಮಾಡಿ ದ್ದರು. ಅವರು ರಸ್ತೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇಲ್ಲಿಯವರೆಗೂ ಕಂದಾಯ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಮುಂದಾಗಿದ್ದಾರೆ.

Related Posts

Leave a Reply

Your email address will not be published. Required fields are marked *