Tuesday, February 03, 2026
Menu

ವಾಟ್ಸಾಪ್‌ ಪ್ರೈವೇಟ್‌ ಡೇಟಾ ಶೇರಿಂಗ್‌: ಭಾರತದಿಂದ ಹೊರ ಹೋಗಿ ಎಂದ ಸುಪ್ರೀಂ

ಬಳಕೆದಾರರ ದತ್ತಾಂಶ ಹಂಚಿಕೆ ಮತ್ತು ಖಾಸಗಿತನದ ಉಲ್ಲಂಘನೆ ಸಂಬಂಧ ಸುಪ್ರೀಂ ಕೋರ್ಟ್ ವಾಟ್ಸಾಪ್‌ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಸಂವಿಧಾನದ ನಿಯಮಗಳನ್ನು ಅನುಸರಿಸದಿದ್ದರೆ ಭಾರತದಿಂದ ಹೊರಗೆ ಹೋಗಿ ಎಂದು ಮೆಟಾಗೆ ಸೂಚಿಸಿದೆ.

ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾ ಹಂಚಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಸುಪ್ರೀಂ ಕೋರ್ಟ್‌ ದೇಶ ತೊರೆಯುವಂತೆ ಎಚ್ಚರಿಕೆ ಕೊಟ್ಟಿದೆ.  ನಾಗರಿಕರ ಗೌಪ್ಯತೆಯ ಹಕ್ಕನ್ನು ಖಾಸಗಿ ಕಂಪನಿಗಳು ತಂತ್ರಜ್ಞಾನದ ಹೆಸರಿನಲ್ಲಿ ಕಸಿಯಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು, ಈ ವರ್ತನೆಯನ್ನು “ಖಾಸಗಿ ಮಾಹಿತಿಯ ಕಳ್ಳತನ” ಎಂದು ಕರೆದಿದೆ.

ವಾಟ್ಸಪ್‌ನ 2021 ರ ಗೌಪ್ಯತೆ ನೀತಿʼಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ನಮ್ಮ ದೇಶದ ಗೌಪ್ಯತೆಯ ಜೊತೆ ನೀವು ಆಟವಾಡಲು ಸಾಧ್ಯವಿಲ್ಲ. ನಾಗರಿಕರ ಖಾಸಗಿತನದ ಹಕ್ಕಿಗೆ ಧಕ್ಕೆ ತರುವ ಡೇಟಾ ಹಂಚಿಕೆಯನ್ನು ಸಹಿಸುವು ದಿಲ್ಲ. ಡೇಟಾ ಹಂಚಿಕೊಳ್ಳಿ ಅಥವಾ ಆಪ್ ಬಳಸುವುದು ನಿಲ್ಲಿಸಿ ಎಂಬ ನೀತಿಯು ಖಾಸಗಿ ಮಾಹಿತಿಯನ್ನು ಕಳ್ಳತನ ಮಾಡುವ ಸಭ್ಯ ರೀತಿ ಎಂದು ಹೇಳಿದೆ.

ವಾಟ್ಸಾಪ್‌ನ ಗೌಪ್ಯತಾ ನೀತಿಗಳನ್ನು ಸಾಮಾನ್ಯ ಗ್ರಾಹಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ನ್ಯಾಯಾಧೀಶರಿಗೂ ಅರ್ಥವಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ಹೊರಹಾಕಿದ್ದಾರೆ. ಬಳಕೆದಾರರ ನಡವಳಿಕೆ ಗಳನ್ನು ವಿಶ್ಲೇಷಿಸಿ ಜಾಹೀರಾತುಗಳನ್ನು ತೋರಿಸುವ ಮೂಲಕ ದತ್ತಾಂಶವನ್ನು ಮೌಲ್ಯೀಕರಿಸಲಾಗುತ್ತಿದೆ ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಮೆಟಾ ಮತ್ತು ವಾಟ್ಸಾಪ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಮತ್ತು ಹಿರಿಯ ವಕೀಲ ಅಖಿಲ್ ಸಿಬಲ್ ವಾದ ಮಂಡಿಸಿದರು. ಎಲ್ಲಾ ಸಂದೇಶಗಳು ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್’ ಆಗಿವೆ, ಕಂಪನಿಗಳೂ ಸಹ ನೋಡಲು ಸಾಧ್ಯವಿಲ್ಲ ಎಂದು ಹೇಳಿದರು. ಪೀಠವು ಫೆಬ್ರವರಿ 10 ರಂದು ಈ ವಿಷಯದ ಕುರಿತು ವಿವರವಾದ ಆದೇಶಗಳನ್ನು ನೀಡುವುದಾಗಿ ಹೇಳಿದೆ.

Related Posts

Leave a Reply

Your email address will not be published. Required fields are marked *