Wednesday, September 16, 2026
Menu

ವೈದ್ಯೆಗೆ ಇಂಜೆಕ್ಷನ್‌ ಕೊಟ್ಟು ಕೊಂದ ಪತಿ ಆರು ತಿಂಗಳ ಬಳಿಕ ಅರೆಸ್ಟ್‌

ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದ ವೈದ್ಯ ಪತಿಯನ್ನು ಆರು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಹೆಂಡತಿಯದು ಸ್ವಾಭಾವಿಕ ಸಾವು ಎಂದು ಕುಟುಂಬಸ್ಥರನ್ನು ನಂಬಿಸಿದ್ದ ಆರೋಪಿ ಡಾ. ಮಹೇಂದ್ರರೆಡ್ಡಿ ಬಂಧಿತ.

2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿಯವರು ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿದೆ. ಪ್ರತಿದಿನ ವಾಂತಿ, ಇತರ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಸಂಚು ರೂಪಿಸಿದ್ದ.

ಹುಷಾರಿಲ್ಲದೆ ತವರುಮನೆಯಲ್ಲಿ ಕೃತಿಕಾರೆಡ್ಡಿ ಮಲಗಿದ್ದಾಗ ಅಲ್ಲಿಗೆ ಬಂದಿದ್ದ ಮಹೇಂದ್ರ ರೆಡ್ಡಿ ಆಕೆಗೆ ಇಂಜೆಕ್ಷನ್ ಮೂಲಕ ಎರಡು ದಿನ ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.

ಮನೆಗೆ ಭೇಟಿ ನೀಡಿದ್ದ ಪೊಲೀಸರು ಈ ಬಗ್ಗೆ ದೂರು ನೀಡುವಂತೆ ತಿಳಿಸಿದ್ದರು. ಕುಟುಂಬಸ್ಥರ ದೂರಿನ ಅನ್ವಯ ಯುಡಿಆರ್ ದಾಖಲು ಮಾಡಿದ್ದ ಮಾರತಹಳ್ಳಿ ಪೊಲೀಸರು, ಮೃತ ದೇಹದ ಸ್ಯಾಂಪಲ್ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈಗ ಅದರ ವರದಿ ಕೈಸೇರಿದ್ದು, ಕೃತಿಕಾ ಸಾವಿಗೆ ದೇಹದಲ್ಲಿ ಕಂಡುಬಂದಿರುವ ಅನಸ್ತೇಶಿಯಾ ಅಂಶ ಕಾರಣ ಎಂದು ಪತ್ತೆಯಾಗಿದೆ. ಹೀಗಾಗಿ ಯುಡಿಆರ್​ ಆಗಿದ್ದ ಪ್ರಕರಣವನ್ನು ಕೊಲೆ ಕೇಸ್​ ಆಗಿ ಪರಿವರ್ತಿಸಿ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *