Menu

ಕುರುಬರಹಳ್ಳಿ ಶೆಡ್‌ನಲ್ಲಿ 2.98 ಕೋಟಿ ನಗದು ಪತ್ತೆ

ಬೆಂಗಳೂರಿನ ಕುರುಬರಹಳ್ಳಿಯ ಕೈಗಾರಿಕಾ ಶೆಡ್‌ವೊಂದರಲ್ಲಿ ದಾಖಲೆಗಳಿಲ್ಲದ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ನಗದು ಮೊತ್ತ 2.98 ಕೋಟಿ ರೂ. ಆಗಿದ್ದು, ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾವರೆಕೆರೆ ನಿವಾಸಿಯೊಬ್ಬರು ಈ ಮೊತ್ತವನ್ನು ಸ್ನೇಹಿತನ ಶೆಡ್‌ನಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ರಾಕೇಶ್ ಮತ್ತು ಸಿಬ್ಬಂದಿ ಕುರುಬರಹಳ್ಳಿಯ 11 ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‌ನಲ್ಲಿ ಅಕ್ರಮ ನಗದು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಪೊಲೀಸರು ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ನೋಟುಗಳ ಕಂತೆ ತುಂಬಿಟ್ಟಿರುವುದು ಪತ್ತೆಯಾಗಿವೆ.

ಈ ನಗದು ತಾವರೆಕೆರೆ ನಿವಾಸಿ ನಾಗರಾಜ್ ಎಂಬವರಿಗೆ ಸೇರಿದ್ದು , ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್ ಎಂಬಾತನಿಗೆ ಸೇರಿದ ಶೆಡ್‌ನಲ್ಲಿ ಇಟ್ಟಿದ್ದರು. ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ನ್ಯಾಯಾಲಯದ ಅನುಮತಿ ಪಡೆದ ಬಳಿಕ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ನಾವು ಚಿತ್ರದುರ್ಗದಲ್ಲಿದ್ದ ನಮ್ಮ ಆಸ್ತಿಯನ್ನು ಮಾರಾಟ ಮಾಡಿ ಈ ಹಣವನ್ನು ತಂದಿದ್ದೇವೆ. ಬ್ಯಾಂಕಿನಲ್ಲಿರುವ ಸಾಲವನ್ನು ಚುಕ್ತಾ ಮಾಡಲು ಈ ನಗದನ್ನು ಇಟ್ಟುಕೊಂಡಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.

ಬಂಧಿತರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಹಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಇಲ್ಲದ ಕಾರಣ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ಐಟಿ ಇಲಾಖೆಯ ಅಧಿಕಾರಿಗಳು ಮೊತ್ತದ ಅಸಲಿ ಮೂಲ ಯಾವುದು ಎಂಬ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *