ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿಯರು ಅಪಹರಿಸಿಕೊಂಡು ಹೋಗಿದ್ದ 25 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳಮುಖಿಯರ ತಂಡ ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆ ಮಾಡಿಸಲು ಮಂಗಳಮುಖಿಯರ ತಂಡ ಪ್ಲಾನ್ ಮಾಡಿತ್ತು ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸರು ಯುವಕನನ್ನು ಮಧುರೈನಿಂದ ರಕ್ಷಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಪೊಲೀಸರು ಮಧುರೈಗೆ ತೆರಳಿದ್ದಾಗ ಯುವಕ ಮಹಿಳೆಯರ ವೇಷದಲ್ಲಿದ್ದ. ಲಿಂಗ ಪರಿವರ್ತನೆ ನಡೆದಿದೆಯಾ ಎಂಬ ಅನುಮಾನ ವ್ಯಕ್ತವಾಗಿದ್ದು, ಯುವಕನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳಮುಖಿಯರ ತಂಡದ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಯುವಕ ಬೆಂಗಳೂರಿನ ಮಸೀದಿಯೊಂದರ ಮೌಲಾನರ ಮಗನಾಗಿದ್ದಾನೆ. ಮಗ ಕಾಣೆಯಾಗಿದ್ದಾನೆಂದು ಅವರು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಸ್ತೆ ದಾಟುತ್ತಿದಾಗ ಬೈಕ್ ಡಿಕ್ಕಿ: ಬಾಲಕಿ ಸಾವು
ಮಂಡ್ಯ ಜಿಲ್ಲೆಯ ದಳವಾಯಿ ಕೋಡಿಹಳ್ಳಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾಳೆ. ಗ್ರಾಮದ ನವೀನ್ ಕುಮಾರ್ ಪುತ್ರಿ ದೀಕ್ಷಿತಾ (8) ಮೃತ ಬಾಲಕಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಶಾಲೆ ಮುಗಿಸಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಹಲಗೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದೆ.
ಗಾಯಗೊಂಡ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


