ಬೆಳಗಾವಿ ರಾಯಭಾಗ ತಾಲೂಕಿನಲ್ಲಿ 19 ವರ್ಷದ ಯುವತಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಯುವತಿ ನಾಪತ್ತೆ ಹಿಂದೆ ಮದುವೆಯಾಗಿ ಮೂವರು ಮಕ್ಕಳಿರುವ ಪಕ್ಕದ ಮನೆಯ ವ್ಯಕ್ತಿಯ ಕೈವಾಡವಿದೆ ಎಂದು ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಣೆಯಾದ ಯುವತಿಯನ್ನು ಪ್ರಿಯಾಂಕಾ ಚಂದ್ರಕಾಂತ ಅಕ್ಕೇನ್ನವರ್ (19) ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ಕಾಲೇಜಿಗೆ ಹೋಗಿದ್ದವರು ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಪಕ್ಕದ ಮನೆಯ ಸುರೇಶ್ ಹುಲ್ಲೇನ್ನವರ್ ಎಂಬಾತನ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದು, ಆತನೇ ಪ್ರಿಯಾಂಕಾಳನ್ನು ಅಪಹರಿಸಿದ್ದಾನೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆತನೊಂದಿಗೆ ಯುವತಿ ಪರಾರಿಯಾಗಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಗಳ ರೇಪ್‌ಗೆ ಕುಮ್ಮಕ್ಕಿತ್ತ ತಂದೆ
ತಂದೆ ತನ್ನ ಸ್ನೇಹಿತನ ಮನೆಗೆ ಸಣ್ಣ ವಯಸ್ಸಿನ ಮಗಳನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿರುವ ಪ್ರಕರಣ ಕೊಪ್ಪಳದಲ್ಲಿ ನಡೆದಿದೆ. ನಗರ ಪೊಲೀಸ್ ಠಾಣೆಯಲ್ಲಿ ತಂದೆ ಹಾಗೂ ಆತನ ಸ್ನೇಹಿತನ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ.
ತಂದೆ ತನ್ನ ಸ್ನೇಹಿತನ ಮನೆಗೆ ಕರೆದು ಕೊಂಡು ಹೋಗಿದ್ದಾಗ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದು ನಗರ ಠಾಣೆಗೆ ಬಂದು ದೂರು ನೀಡಿದ್ದಾಗಿ ತಿಳಿಸಿದ್ದಾಳೆ. ಬಾಲಕಿ ನೀಡಿದ ದೂರಿನಡಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.


