ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಷ್ಟೀಯ ನಾಯಕರು. ಅವರ ಹಾಗೂ ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ದುಡಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಆರ್. ಬಿ. ತಿಮ್ಮಾಪುರ ಅವರ ದಲಿತ ಸಿಎಂ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, ಏನೇನೋ ಹೇಳುವ ನಿಮ್ಮ (ಮಾಧ್ಯಮ) ಮಾತುಗಳಿಗೆ ನಾನು ಉತ್ತರ ನೀಡಲು ಸಿದ್ಧನಿಲ್ಲ ಎಂದರು. ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, ಇದೇ ಬೆಳಗಾವಿ ನೆಲದಲ್ಲಿನ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಿ. ಬಿಜೆಪಿ ಮಾಡಿದ್ದ ಕೊಳೆ, ಕಸವನ್ನು ಗುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಎಂದು ತಿರುಗೇಟು ನೀಡಿದರು.
ಸತೀಶ್ ಜಾರಕಿಹೊಳಿ ಅವರು ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರ ದುಬೈ ಪ್ರವಾಸದ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ನಾನು ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, ನಾವೆಲ್ಲರೂ ಸಹ ಗಾಂಧಿ ವಂಶಸ್ಥರೇ, ಗಾಂಧಿ ಅವರು ಕಟ್ಟಿದ ಭಾರತದವರು. ಅದಕ್ಕೆ ನಾವು ಗಾಂಧಿ ಭಾರತ ಎಂದು ಹೆಸರಿಟ್ಟು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಜ. 26- 27 ರಂದು ಎಐಸಿಸಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿದ ಮಧ್ಯಪ್ರದೇಶದ ಮಾಹೋದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಅಧಿವೇಶನದ ನಿರ್ಣಯಗಳು ಹಾಗೂ ಒಂದಷ್ಟು ಇತಿಹಾಸದ ಪುಸ್ತಕಗಳನ್ನು ಜ. 21 ರಂದು ನಡೆಯುವ ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.
ಇದು ಎಐಸಿಸಿಯಿಂದ ನಡೆಯುವ ಕಾರ್ಯಕ್ರಮ. ಜ.21 ರ ಬೆಳಿಗ್ಗೆ ಸುವರ್ಣ ಸೌಧದ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಅನಾವರಣ ಮಾಡಲಿದ್ದಾರೆ. ರಾಹುಲ್ ಗಾಂಧಿ ಅವರ ಉಪಸ್ಥಿತಿ ಇರಲಿದೆ ಎಂದರು. ಕಳೆದ ಬೆಳಗಾವಿ ಅಧಿವೇಶನದ ವೇಳೆ ಜಿಲ್ಲೆಯ ಮಾಧ್ಯಮದವರಿಗೆ ಪಾಸ್ ವಿತರಣೆಯಲ್ಲಿ ಆದ ಲೋಪದ ಬಗ್ಗೆ ಕೇಳಿದಾಗ, ಈ ನ್ಯೂನ್ಯತೆ ನನಗೆ ಆನಂತರ ಗಮನಕ್ಕೆ ಬಂದಿತು. ಎಲ್ಲಾ ಭಾಗದ ಪತ್ರಕರ್ತರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು. ನಿಮಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಲಾಗುವುದು ಎಂದು ನಾನೇ ಖುದ್ದಾಗಿ ಹೇಳುತ್ತಿದ್ದೇನೆ. ಜೈ ಬಾಪು, ಜೈ ಭೀಮ್ , ಜೈ ಸಂವಿಧಾನ ಸಮಾವೇಶಕ್ಕೆ ದಳ, ಬಿಜೆಪಿಯವರು ಬಿಟ್ಟು ಮಾಧ್ಯಮದವರು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದು ತಿಳಿಸಿದರು. ರಾಜ್ಯದಲ್ಲಿ ಸರಣಿ ಕಳ್ಳತನವಾಗುತ್ತಿರುವ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂದು ಕೇಳಿದಾಗ,ಇದಕ್ಕೆ ಗೃಹಸಚಿವರು ಸರಿಯಾದ ಉತ್ತರ ನೀಡುತ್ತಾರೆ ಎಂದರು.
ಮಹದಾಯಿ ವಿವಾದ ಬಗೆಹರಿಯದ ಬಗ್ಗೆ ಕೇಳಿದಾಗ, ಇದರ ಬಗ್ಗೆ ಹತ್ತು ದಿನಗಳ ಹಿಂದೆ ದೆಹಲಿಯಲ್ಲಿ ಸಭೆ ನಡೆದಿತ್ತು. ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಕೇಂದ್ರ ಜಲಶಕ್ತಿ ಸಚಿವರರಿಗೆ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಪ್ರಧಾನಿಗಳೇ ಹೇಳಿದ್ದರು. ಮುಂದೆ ಸಂಸತ್ ಅಧಿವೇಶನ ನಡೆಯುವ ವೇಳೆಯಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.