ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಈಗ ವಿಕೋಪಕ್ಕೆ ತಿರುಗಿದೆ.
ಎರಡು ಸಮುದಾಯಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದ್ದು, ಪರಸ್ಪರ ಕಲ್ಲು ತೂರಾಟ ನಡೆದಿದೆ. ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಘಟನೆಯ ಹಿನ್ನೆಲೆ
ಗ್ರಾಮದಲ್ಲಿ ಉದ್ದೇಶಿತ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡಿದ್ದರು. ಈ ಸರ್ವೆಗೆ ಸ್ಥಳೀಯ ನಿವಾಸಿ ಸದಾಶಿವ ಭಜಂತ್ರಿ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಈ ವಿರೋಧದಿಂದ ಕೆರಳಿದ ಮತ್ತೊಂದು ಗುಂಪು, ಸದಾಶಿವ ಅವರ ಮನೆಯ ಮೇಲೆ ನೂರಾರು ಜನರೊಂದಿಗೆ ಮುಗಿಬಿದ್ದು ಕಲ್ಲು ತೂರಾಟ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.
ಜೀವಾಪಾಯದಿಂದ ಪಾರಾದ ಕುಟುಂಬ:
ದಾಳಿಯ ವೇಳೆ ರೊಚ್ಚಿಗೆದ್ದ ಗುಂಪು ಮನೆಯ ಮೇಲೆ ಕಲ್ಲು ಎಸೆಯಲಾರಂಭಿಸಿದಾಗ, ಮನೆಯಲ್ಲಿದ್ದ ಕುಟುಂಬದ ಸದಸ್ಯರು ತಕ್ಷಣ ಬಾಗಿಲು ಹಾಕಿಕೊಂಡು ಒಳಗೆ ಅವಿತುಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಮನೆ ಹಾಗೂ ಶೌಚಾಲಯದ ಗೋಡೆಗಳಿಗೆ ಭಾರಿ ಹಾನಿಯಾಗಿದೆ. ಕಲ್ಲು ತೂರಾಟದ ಸಂದರ್ಭದಲ್ಲಿ ಮನೆಯಲ್ಲಿದ್ದ ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ, ಬಿಗಿ ಭದ್ರತೆ:
ವಿಷಯ ತಿಳಿಯುತ್ತಿದ್ದಂತೆಯೇ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗ್ರಾಮದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಪಹರೆ ಮುಂದುವರಿದಿದ್ದು, ಶಾಂತಿ ಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.


