ತುಮಕೂರು ನಗರದಲ್ಲಿ ಆಟೋ ಚಾಲಕರೊಬ್ಬರು ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದಾರೆ.
ತುಮಕೂರಿನ ಹನುಮಂತಪುರ ನಿವಾಸಿ ರವಿಕುಮಾರ್ ಅವರ ಆಟೋದಲ್ಲಿ ಪ್ರಯಾಣಿಕರು 4 ಲಕ್ಷ ಬೆಲೆ ಬಾಳುವ ಒಡವೆ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದರು. ಅರಸೀಕೆರೆ ಮೂಲದ ಗಾಯತ್ರಿ ಎಂಬುವರಿಗೆ ಸೇರಿದ ಬ್ಯಾಗ್ ಅದಾಗಿತ್ತು. ಆಕೆ ಕುಂದೂರು ಗ್ರಾಮದ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಮೂರು ಜನ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಇಳಿಯುವಾಗ ಆಟೋದಲ್ಲೆ ಬ್ಯಾಗ್ ಬಿಟ್ಟು ಹೋಗಿದ್ದರು.
ಬ್ಯಾಗ್ ಗಮನಿಸಿದ ಆಟೋ ಚಾಲಕ ರವಿಕುಮಾರ್ ಪ್ರಯಾಣಿಕರಿಗಾಗಿ ಹುಡುಕಾಡಿದರೆ, ಬ್ಯಾಗ್ ಬಿಟ್ಟು ಹೋದವರು ಆ ಆಟೋಗಾಗಿ ಹುಡುಕಾಡಿದ್ದರು. ಆಟೋ ಸಿಗದೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಪ್ರಯಾಣಿಕರು ಸಿಗದೆ ಬ್ಯಾಗ್ ಠಾಣೆಗೆ ಒಪ್ಪಿಸಲು ಆಟೋ ಚಾಲಕ ರವಿಕುಮಾರ್ ಆಗಮಿಸಿದ್ದರು.
ಬ್ಯಾಗ್ ಅನ್ನು ಗಾಯತ್ರಿಯವರಿಗೆ ಒಪ್ಪಿಸಿದ ಪೊಲೀಸರು, ಆಟೋ ಚಾಲಕ ರವಿಕುಮಾರ್ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಬ್ಯಾಗ್ ಪಡೆದುಕೊಂಡ ಪ್ರಯಾಣಿಕರು ರವಿ ಕುಮಾರ್‌ಗೆ 200 ರೂ. ನೀಡಿದಾಗ ಸ್ವೀಕರಿಸಲು ನಿರಾಕರಿಸಿದರು.